ದ.ಕ. ಜಿಲ್ಲೆಯಲ್ಲಿ ಆ.5ರವರೆಗೆ ರಾತ್ರಿ ನಿರ್ಬಂಧ ವಿಸ್ತರಣೆ: ಡಿಸಿ ಡಾ. ರಾಜೇಂದ್ರ

ಜಿಲ್ಲಾಧಿಕಾರಿ ಡಾ. ರಾಜೇಂದ್ರ
ಮಂಗಳೂರು, ಆ.2: ದ.ಕ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಹೇರಲಾಗಿದ್ದ ನಿರ್ಬಂಧಗಳನ್ನು ಆ.5ರವರೆಗೆ ವಿಸ್ತರಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಈ ಹಿಂದೆ ಆ.3ರವರೆಗೆ ನಿರ್ಬಂಧ ವಿಧಿಸಲಾಗಿತ್ತು. ಪೊಲೀಸ್ ಇಲಾಖೆಯ ಮನವಿಯಂತೆ ನಿರ್ಬಂಧವನ್ನು ಮತ್ತೆರಡು ದಿನ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ರಾತ್ರಿ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ. ಸಹಜ ಸ್ಥಿತಿಯತ್ತ ಮರಳಿಸುವ ಸಲುವಾಗಿ ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಸಂಜೆ 6ರ ಬಳಿಕ ವಾಹನ ತಪಾಸಣೆ ಆರಂಭಿಸುತ್ತಿದ್ದೇವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಆದಷ್ಟು ತ್ವರಿತವಾಗಿ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿರ್ಬಂಧದಿಂದ ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗಬಹುದು. ಆದರೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಮತ್ತು ಜನಸಾಮಾನ್ಯರ ಸುರಕ್ಷತೆಯ ಉದ್ದೇಶದಿಂದ ಇದು ಅಗತ್ಯವಾಗಿದೆ. ಹಾಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರೂ ಮನವಿ ಮಾಡಿದ್ದಾರೆ.





