‘ಗ್ರೇ ವಾಟರ್ ನಿರ್ವಹಿಸಿದವರೇ ಗ್ರೇಟ್’; ದ್ರವ ತ್ಯಾಜ್ಯ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಅಭಿಯಾನ

ಉಡುಪಿ: ಉಡುಪಿ ಜಿಲ್ಲೆಯ ಗ್ರಾಮಗಳನ್ನು ಈಗಾಗಲೇ ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾ ಗಿದೆ. ಇದರೊಂದಿಗೆ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಕಾರ್ಯಕ್ರಮದಲ್ಲಿ ಮನೆ ಮನೆಯಿಂದ ಘನ ತ್ಯಾಜ್ಯ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ. ಸಂಪೂರ್ಣ ಗ್ರಾಮವನ್ನು ಸ್ವಚ್ಛವಾಗಿಸಲು ಮನೆ ಮನೆಯಲ್ಲೇ ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆಯಾಗಬೇಕಾಗಿದೆ. ಮಾನವ ಬಳಕೆಯಿಂದ ಕಲುಷಿತವಾದ ನೀರನ್ನು ದ್ರವ ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ.
ದ್ರವ ತ್ಯಾಜ್ಯವನ್ನು ಮೂಲದಲ್ಲಿಯೇ ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದಲ್ಲಿ ಅದು ನದಿ, ಬಾವಿ ಮುಂತಾದ ನೀರಿನ ಮೂಲಗಳಿಗೆ ಸೇರಿ ಕುಡಿಯುವ ನೀರು ಕಲುಷಿತಗೊಳ್ಳಬಹುದು. ಮನೆಯಲ್ಲಿ ಉತ್ಪತ್ತಿಯಾಗುವ ನೀರನ್ನು ಮನೆಯ ಸುತ್ತಮುತ್ತ ಅಲ್ಲಲ್ಲಿ ಹರಿಯಬಿಟ್ಟರೆ ನೊಣ ಹಾಗೂ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡಲು ಕಾರಣವಾಗಬಹುದು. ದ್ರವ ತ್ಯಾಜ್ಯದಲ್ಲಿನ ಕಲ್ಮಶಗಳು ಮಣ್ಣನ್ನು ಸೇರಿ ಮಣ್ಣಿನ ಆರೋಗ್ಯ ಕೆಡಬಹುದು. ದ್ರವ ತ್ಯಾಜ್ಯದ ವಿಷಕಾರಕಗಳು ಜಲಮೂಲಗಳಿಗೆ ಸೇರಿ ಜಲಚರಗಳಿಗೆ ಮಾರಣಾಂತಿಕವಾಗಬಹುದು. ಒಟ್ಟಾರೆಯಾಗಿ ಪರಿಸರ ವ್ಯವಸ್ಥೆಗೆ ಅವುಗಳು ಅಡ್ಡಿಯಾಗಬಹುದು. ಆದ್ದರಿಂದ ದ್ರವ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ.
ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆ ಕುರಿತಂತೆ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಅವರ ಮೂಲಕ ಅವರ ಕುಟುಂಬದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಗ್ರೇ ವಾಟರ್ ನಿರ್ವಹಿಸಿದವರೇ ಗ್ರೇಟ್’ ಎಂಬ ಜಾಗೃತಿ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದಡಿ ತರಬೇತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಜಿಲ್ಲೆಯಾದ್ಯಂತ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪಿಪಿಟಿ, ಆಡಿಯೋ, ವೀಡಿಯೋ, ಪ್ರತಿಜ್ಞೆ ಸ್ವೀಕಾರ, ಗುಂಪು ಚಟುವಟಿಕೆಗಳು, ಕರಪತ್ರಗಳ ವಿತರಣೆಗಳ ಮೂಲಕ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳ ಕುಟುಂಬಗಳು ಮತ್ತು ಸುತ್ತಮುತ್ತಲಿನ ಸಮುದಾಯ ಕಿಚನ್ ಗಾರ್ಡನ್, ಇಂಗು ಗುಂಡಿ ನಿರ್ಮಿಸಿಕೊಳ್ಳುವಂತೆ ಪ್ರೇರೇಪಣೆ ನೀಡಲಾಗುತ್ತದೆ.
ಇದಕ್ಕಾಗಿ ಜಿಲ್ಲೆಯ ವಿವಿಧ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿಗಳನ್ನು ಒಳಗೊಂಡ 84 ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಅಗತ್ಯ ತರಬೇತಿ ಹಾಗೂ ಅವರು ಭೇಟಿ ನೀಡಿ ಜಾಗೃತಿ ಮೂಡಿಸಬೇಕಾದ ಶಾಲೆಗಳ ವಿವರ ಹಾಗೂ ವೇಳಾಪಟ್ಟಿಯನ್ನು ನೀಡಿದ್ದು, ಆಗಸ್ಟ್ 15ರೊಳಗೆ ನಿಗದಿತ ಗುರಿ ಸಾಧಿಸಲು ಸೂಚನೆ ನೀಡಲಾಗಿದೆ.
ದ್ರವ ತ್ಯಾಜ್ಯವನ್ನು ಪ್ರಮುಖವಾಗಿ ಕಪ್ಪು ನೀರು ಹಾಗೂ ಬೂದು ನೀರು ಎಂದು ವಿಂಗಡಿಸಲಾಗಿದ್ದು, ಕಪ್ಪು ನೀರು ಎಂದರೆ ಶೌಚಾಲಯದಿಂದ ಬರುವ ಮಲ ಮಿಶ್ರಿತ ನೀರು. ಬೂದು ನೀರು ಎಂದರೆ ನಾವು ದಿನನಿತ್ಯ ಬಳಸುವ ಸ್ನಾನದ, ಪಾತ್ರೆ ತೊಳೆದ, ಅಡುಗೆ ಮನೆ ಮತ್ತು ಇತರೆ ಮನೆ ಬಳಕೆಯ ನೀರು. ಕಪ್ಪು ನೀರು ಶೌಚಾಯದ ಗುಂಡಿಯಿಂದ ಉತ್ಪಾದನೆಯಾದರೆ, ಬೂದು ನೀರು, ಸ್ನಾನದ ಕೊಠಡಿ, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯು ವುದು ಮುಂತಾದ ದಿನ ನಿತ್ಯದ ಚಟುಚಟಿಕೆಗಳಿಂದ ಉಂಟಾಗುತ್ತದೆ.
ಒಂದೇ ಗುಂಡಿ ಇರುವ ಶೌಚಾಲಯದ ಗುಂಡಿ ತುಂಬಿದ ಕೂಡಲೇ ಯಂತ್ರಗಳ ಸಹಾಯದಿಂದ ಖಾಲಿ ಮಾಡಿ ಮಲ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಸಾಗಿಸಿ ವಿಲೇವಾರಿ ಮಾಡುವ ಮೂಲಕ ನಿರ್ವಹಣೆ ಮಾಡು ವುದು ಸರಿಯಾದ ವಿಧಾನವಾಗಿದೆ. ಒಂದು ಗುಂಡಿಯ ಶೌಚಾಲಯವನ್ನು ಅವಳಿ ಗುಂಡಿಯ ಶೌಚಾಲಯವನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಮೂಲಕ ಕಪ್ಪು ನೀರಿನ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತದೆ.
ಮನೆಯಲ್ಲಿ ಕೈತೋಟ ಹಾಗೂ ಇಂಗು ಗುಂಡಿಗಳ ನಿರ್ಮಾಣ ಮಾಡಿ ಕೊಳ್ಳುವ ಮೂಲಕ ಬೂದು ನೀರಿನ ಶೇ.೯೦ರಷ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಸಮುದಾಯ ಇಂಗು ಗುಂಡಿ ಹಾಗೂ ಇತರೇ ಸಮುದಾಯ ಹಂತದ ತಂತ್ರಜ್ಞಾನಗಳ ಮೂಲಕ ಪರಿಹಾರ ಒದಗಿಸಬೇಕಾ ಗುತ್ತದೆ. ಬೂದು ನೀರಿನ ನಿರ್ವಹಣೆಗೆ ಇಂಗು ಗುಂಡಿ ನಿರ್ಮಾಣ ಉತ್ತಮ ಪರಿಹಾರವಾಗಿದ್ದು ಇದರ ನಿರ್ಮಾಣಕ್ಕೆ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಅನುದಾನವನ್ನೂ ಕೂಡಾ ಪಡೆಯಬಹುದಾಗಿದೆ.
-ಪ್ರಸನ್ನ ಎಚ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಡುಪಿ ಜಿಪಂ.