ನನ್ನ ಮಗನ ತೇಜೋವಧೆ ಮಾಡಿರುವ ಮಾಧ್ಯಮಗಳ ವಿರುದ್ಧ ಪ್ರಕರಣದಾಖಲಿಸಿ ಕ್ರಮಕೈಗೊಳ್ಳಿ:ಕೊಲೆಯಾದ ಫಾಝಿಲ್ ತಂದೆ ಉಮರ್ಫಾರೂಕ್

ಉಮರ್ ಫಾರೂಕ್
ಸುರತ್ಕಲ್, ಆ.2: ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುತ್ತಿ ರುವ ಪೊಲೀಸ್ ಇಲಾಖೆ ವಿನಾಕಾರಣ ನನ್ನ ಮಗನ ತೇಜೋವಧೆ ಮಾಡಿರುವ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಕೊಲೆಯಾದ ಫಾಝಿಲ್ ತಂದೆ ಉಮರ್ ಫಾರೂಕ್ ಅವರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಆರೋಪಿಗಳ ಬಂಧನದ ಬಳಿಕ ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, "ಎಡಿಜಿಪಿ ಅಲೋಕ್ ಕುಮಾರ್ ಮತ್ತು ಪೊಲೀಸ್ ಕಮಿಷನರ್ ಶಶಿ ಕುಮಾರ್ ಅವರು ಭರವಸೆ ನೀಡಿದಂತೆ ಹಂತಕರನ್ನು ಬಂಧಿಸಿದ್ದಾರೆ. ನನ್ನ ಕುಟುಂಬ ಅವರಿಗೆ ಋಣಿಯಾಗಿದೆ" ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸುತ್ತಿರುವವರನ್ನು ಪೊಲೀಸ್ ಇಲಾಖೆ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಇದು ಉತ್ತಮ ಬೆಳವಣಿಗೆ. ಆದರೆ, "ನಾವು ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಸಂದರ್ಭ ಕೆಲ ಮಾಧ್ಯಮಗಳು ನನ್ನ ಮಗನ ಕೊಲೆಗೆ ಪ್ರೀತಿ-ಪ್ರೇಮ ಕಾರಣ, ಶಿಯಾ- ಸುನ್ನಿ ಕಾರಣ ಎಂದೆಲ್ಲಾ ಪ್ರಕಟಿಸಿ ನನ್ನ ಮಗನ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಚಾರಿತ್ರ್ಯವಧೆ ಮಾಡಿವೆ.
ಆದರೆ, ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಕಮಿಷನರ್ ಅವರು ಈ ಎಲ್ಲಾ ಆರೋಪಗಳನ್ನು ಅಲ್ಲಗೆಳೆದು. ಇವು ಸುಳ್ಳು ಆರೋಪಗಳೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಿರುವಾಗ ಸುಳ್ಳು ಸುದ್ದಿ ಪ್ರಕಟಿಸಿರುವ ಮಾಧ್ಯಮಗಳ ವಿರುದ್ಧವೂ ಪೊಲೀಸ್ ಇಲಾಖೆ ಕಾನೂನು ಕ್ರಮಕೈಗೊಳ್ಳಬೇಕೆಂದು ಫಾಝಿಲ್ ಅವರ ತಂದೆ ಉಮರ್ ಫಾರೂಕ್ ಆಗ್ರಹಿಸಿದರು.
ಕೆಲದಿನಗಳ ಹಿಂದೆ ಶಾಸಕು, ಸಚಿವರು ಆರೋಪಿಗಳ ಪತ್ತೆಯಾದರೆ ಎನ್ ಕೌಂಟರ್ ಮಾಡುವುದಾಗಿ ಹೇಳಿಕೆಗಳನ್ನು ನೀಡಿದ್ದರು. ಅದರಂತೆ ನನ್ನ ಮಗನನ್ನು ವಿನಾಕಾರಣ ಕೊಲೆಗೈದಿರುವ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನೂ ಎನ್ ಕೌಂಟರ್ ಮಾಡಲಿ ಎಂದು ಉಮರ್ ಫಾರೂಕ್ ಸರಕಾರಕ್ಕೆ ಸವಾಲು ಹಾಕಿದರು.
ಈ ವೇಳೆ ಎಲ್ಲಾ ಹೆತ್ತವರಿಗೆ ಕಿವಿಮಾತು ಹೇಳಿದ ಅವರು, ಎಲ್ಲಾ ಹೆತ್ತವರು ತಮ್ಮ ಮಕ್ಕಳ ಕುರಿತು ಅವರ ಚಲನವಲನಗಳ ಕುರಿತು ಅರಿತುಕೊಳ್ಳಬೇಕು. ಇಲ್ಲವಾದರೆ, ನಿಮ್ಮ ಮಕ್ಕಳು ರಾಜಕೀಯದವರ ಕೈಗೆ ಸಿಲುಕಿ ಒಂದಾ ನನ್ನ ಮಗನ ಸ್ಥಿತಿಗೆ ತಲುಪುತ್ತಾರೆ ಇಲ್ಲವಾದರೆ ಕೊಲೆಗಡುಕರಾಗುತ್ತಾರೆ ಎಂದು ಕಿವಿಮಾತು ಹೇಳಿದರು.