ಚಿಕ್ಕಮಗಳೂರು; ಸಿನೆಮಾ ವೀಕ್ಷಣೆ ವೇಳೆ ಚಿತ್ರಮಂದಿರದಲ್ಲಿ ಗಲಾಟೆ ಪ್ರಕರಣ: ಆರೋಪಿಗಳ ಬಂಧನ

ಚಿಕ್ಕಮಗಳೂರು, ಆ.2: ವಿಕ್ರಾಂತ್‍ರೋಣ ಚಿತ್ರ ವೀಕ್ಷಣೆ ವೇಳೆ ನಗರದ ಮಿಲನ ಚಿತ್ರಮಂದಿರದ ಬಳಿ ಮಚ್ಚು, ಲಾಂಗು ಹಿಡಿದು ಮಾರಾಮರಿ ನಡೆಸಿದ್ದ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ಮಂಗಳವಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಜು.28ರಂದು ನಗರದ ಮಿಲನ ಚಿತ್ರಮಂದಿರದ ಬಳಿ ವಿಕ್ರಾಂತ್ ರೋಣ ಸಿನಿಮಾ ವೀಕ್ಷಣೆ ವೇಳೆಯಲ್ಲಿ 2 ಗುಂಪುಗಳ ನಡುವೆ ನಡೆದ ಗಲಾಟೆಯ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಹಾಡುಹಗಲೇ ಮಚ್ಚು, ಲಾಂಗು, ಡ್ರಾಗರ್‍ಗಳು ಝಳಪಿಸಿದ್ದನ್ನು ನೋಡಿ ಕಾಫಿನಾಡಿನ ಜನರು ಮತ್ತೊಂದು ದಕ್ಷಿಣ ಕನ್ನಡ ಜಿಲ್ಲೆ ಆಗಿಬಿಡುತ್ತೇನೋ ಎಂಬ ಆತಂಕದಲ್ಲಿದ್ದರು. ಈ ಗಲಾಟೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು. ಮಂಗಳವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್ ಅಕ್ಷಯ್ ಪ್ರತಿಕ್ರಿಯೆ ನೀಡಿದ್ದು. ಜು.28ರಂದು ಮಿಲನ ಚಿತ್ರಮಂದಿರದ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಸಿನಿಮಾ ವೀಕ್ಷಣೆ ವೇಳೆ ಒಬ್ಬ ಹುಡುಗ ಪದೇಪದೇ ಹೊರಗೆ-ಒಳಗೆ ಓಡಾಡುವುದನ್ನು ಮಾಡುತ್ತಿದ್ದ. ಅವನು ನಾನು ಕಿಚ್ಚ ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷ ಎಂದು ಹೇಳಿಕೊಂಡು ನಾನು ಏನು ಮಾಡಿದರೂ ನಡೆಯುತ್ತೆ ಎಂದು ಹೇಳಿಕೊಂಡಿದ್ದಾನೆ. ಇದೇ ವಿಷಯವಾಗಿ ಮಂದಿರದ ಒಳಗೆ ಸಣ್ಣದಾಗಿ ಗಲಾಟೆ ಆರಂಭವಾದ ಹಿನ್ನೆಲೆಯಲ್ಲಿ ಎಲ್ಲರನ್ನೂ ಚಿತ್ರಮಂದಿರದಿಂದ ಹೊರ ಹಾಕಲಾಗಿತ್ತು. ಆ ನಂತರ ಹೊರಗೆ ಬಂದು ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ. ಕಾರಿನಲ್ಲಿಟ್ಟಿದ್ದ ಮಚ್ಚು, ಲಾಂಗು, ಡ್ರಾಗರ್‍ಗಳನ್ನು ತೆಗೆದುಕೊಂಡು ಎರಡು ಗುಂಪಿನವರೂ ಹೊಡೆದಾಡಿಕೊಂಡಿದ್ದಾರೆ ಎಂದರು.
ಪ್ರಕರಣದಲ್ಲಿ ಭಾಗಿಯಾಗಿದ್ದ 8 ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗಳು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಚಿಕ್ಕಮಗಳೂರು ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ 4 ತನಿಖಾ ತಂಡಗಳನ್ನು ರಚನೆ ಮಾಡಲಾಗಿತ್ತು. ಬಸವನಹಳ್ಳಿ ಠಾಣೆಯ ಪಿಎಸ್ಸೈ ರವಿ, ಸಂಚಾರಿ ಠಾಣೆಯ ಪಿಎಸ್ಸೈ ಚಂದ್ರಶೇಖರ್, ಕಡೂರು ಪಿಎಸ್ಸೈಹರೀಶ್ ಹಾಗೂ ನಗರ ಠಾಣೆಯ ನಾಗೇಂದ್ರ ನಾಯ್ಕ್ ಇವರುಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, 24 ಗಂಟೆಯಲ್ಲೇ ಸಂಪೂರ್ಣ ಮಾಹಿತಿ ಕಲೆಹಾಕಿದ ತಂಡಗಳು 2-3 ದಿನಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ಆರೋಪಿಗಳ ಪೈಕಿ 6 ಮಂದಿ ಕೃತ್ಯದಲ್ಲಿ ನೇರವಾಗಿ ಭಾಗಿಯಗಿದ್ದವರು ಹಾಗೂ ಇಬ್ಬರನ್ನು ಪರೋಕ್ಷವಾಗಿ ಸಹಕಾರ ನೀಡಿದ ಆರೋಪದ ಮೇರೆಗೆ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ತನಿಖೆಗೊಳಪಡಿಸಿದಾಗ ಚಿಕ್ಕಪುಟ್ಟ ಚಿಲ್ಲರೆ ವಿಷಯಕ್ಕಾಗಿ ಹೊಡೆದಾಟ ನಡೆದಿರುವುದು ತಿಳಿದು ಬಂದಿದೆ. ಇವರ ಮಾಹಿತಿಯ ಪ್ರಕಾರ ಇನ್ನೂ ಮೂರ್ನಾಲ್ಕು ಜನರು ಮಾರಾಮರಿಯಲ್ಲಿ ಭಾಗಿಯಾಗಿರುವ ಮಾಹಿತಿ ಸಿಕ್ಕಿದ್ದು, ಅವರನ್ನೂ ಬಂಧಿಸಲಾಗುವುದು ಎಂದರು.
ಈ ಕಾರ್ಯಾಚರಣೆಯಲ್ಲಿ ಸಿಪಿಐಗಳಾದ ಗುರುಪ್ರಸಾದ್, ಜಯರಾಮ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.







