ಸುರತ್ಕಲ್; ನಿಷೇಧಾಜ್ಞೆ ಉಲ್ಲಂಘನೆ: ದ್ವಿಚಕ್ರ, ಕಾರುಗಳ ಸಹಿತ ಹಲವು ಮಂದಿ ವಶಕ್ಕೆ

ಸುರತ್ಕಲ್, ಆ. 2: ಫಾಝಿಲ್ ಕೊಲೆ ಸಂಬಂಧ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಿದ್ದರೂ ದ್ವಿಚಕ್ರ ಮತ್ತು ಕಾರುಗಳಲ್ಲಿ ಹೋಡಾಡುತ್ತಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ವಾಹನಗಳನ್ನು ಪೊಲೀಸರು ತಪಾಸಣೆಗೆ ಒಳಪಡಿಸುತ್ತಿದ್ದರು. ಅಲ್ಲದೆ, ಕಾರವಾರ ಡಿವೈಎಸ್ಪಿ ಮತ್ತು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಚಂದ್ರಪ್ಪ ಅವರು, ಸವಾರರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಸವಾರರಿಗೆ ನೀತಿಪಾಠ ಮಾಡಿ, ಎಚ್ಚರಿಕೆ ನೀಡಿ ಕಳುಹಿಸಿದರು.
ಈ ಸಂದರ್ಭ 25ಕ್ಕೂ ಹೆಚ್ಚಿನ ದ್ವಿಚಕ್ರ ವಾಹನಗಳು ಹಾಗೂ ಹತ್ತಕ್ಕೂ ಹೆಚ್ಚಿನ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಎಚ್ಚರಿಕೆ ನೀಡಿದ ಬಳಿಕ ಬಿಡುಗಡೆಗೊಳಿಸಿದರು.
ಫಾಝಿಲ್ ಹತ್ಯೆಯ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪಣಂಬೂರು, ಸುರತ್ಕಲ್, ಬಜ್ಪೆ ಮತ್ತು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಕಮಿಷನರ್ ಶಶಿಕುಮಾರ್ ಅವರು ಆದೇಶಿಸಿದ್ದರು. ಈ ನಿಷೇಧಾಜ್ಞೆ ಆಗಸ್ಟ್ 5 ವರೆಗೆ ಮುಂದುವರಿಯಲಿದೆ.