ಅಹಿತಕರ ಘಟನೆಗಳ ಸುದ್ದಿ ಪ್ರಸಾರಕ್ಕೆ ಮುನ್ನ ಸ್ಪಷ್ಟನೆ ಪಡೆದುಕೊಳ್ಳಿ: ಮಾಧ್ಯಮಕ್ಕೆ ಪೊಲೀಸ್ ಆಯುಕ್ತರ ಸಲಹೆ

ಮಂಗಳೂರು, ಆ.3: ದ.ಕ. ಜಿಲ್ಲೆಯಲ್ಲಿ ಕೆಲದಿನಗಳ ಅಂತರದಲ್ಲಿ ಮೂರು ಕೊಲೆಗಳು ನಡೆದಿರುವುದರಿಂದ ಸೂಕ್ಷ್ಮ ಪ್ರದೇಶವಾಗಿ ಮಾರ್ಪಟ್ಟಿದೆ. ಅದರ ಜತೆಯಲ್ಲೇ ಜಿಲ್ಲೆಯ ವಿವಿಧ ಕಡೆ ಸುರಿಯುತ್ತಿರುವ ಮಳೆಯೂ ಪರಿಸ್ಥಿತಿಯನ್ನು ಬಿಗಡಾಯಿಸಿದೆ. ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಹಜ ಪರಿಸ್ಥಿತಿಯನ್ನು ತರಲು ಪ್ರಯತ್ನಿಸುತ್ತಿದೆ. ಆದರೆ ಈ ನಡುವೆ ಕೆಲವೊಂದು ಅಹಿತಕರ ಘಟನೆಗಳ ಕುರಿತಂತೆ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಸುದ್ದಿ ಮಾಧ್ಯಮದಲ್ಲಿ ಹರಡುವ ಪ್ರಯತ್ನ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳನ್ನು ಹರಡುವುದು, ಸುದ್ದಿಗಳನ್ನು ಎಲ್ಲೆ ಮೀರಿ ಹರಡುತ್ತಿರುವುದು ಕಂಡು ಬರುತ್ತಿದೆ. ಕೆಲವು ಸ್ಥಳೀಯ ಮಾಧ್ಯಮಕ್ಕೆ ಯಾವುದೇ ರೀತಿಯ ಅಹಿತಕರ ಘಟನೆಗಳ ಮಾಹಿತಿ ದೊರಕಿದಾಗ ಸ್ಥಳೀಯ ಠಾಣೆಗಳ ಅಧಿಕಾರಿಗಳು, ಎಸಿಪಿಗಳು, ಡಿಸಿಪಿ ಅಥವಾ ನನಗೆ ಕರೆ ಮಾಡಿ ಸ್ಪಷ್ಟನೆ ಪಡೆದುಕೊಳ್ಳಿ. ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮ ಗ್ರೂಪ್ ಕೂಡಾ ಇದ್ದು, ಅದರಲ್ಲಿ ಏನಾದರೂ ಇಂತಹ ಮಾಹಿತಿ ಹಾಕಿದಲ್ಲಿ ಅದಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ ಎಂದವರು ತಿಳಿಸಿದ್ದಾರೆ.
ಎಂಆರ್‌ಪಿಎಲ್‌ನಲ್ಲಿ ಜು.30ರಂದು ಯುವಕನೋರ್ವನ ಮೇಲೆ ದಾಳಿಯಾಗಿದೆ ಎಂದು ಸುಳ್ಳು ಸುದ್ದಿ ಹರಡಲಾಗಿತ್ತು. ಅದೇರೀತಿ ಇಂದು ಉಳ್ಳಾಲ ಭಾಗದಲ್ಲಿ 49 ವರ್ಷದ ವ್ಯಕ್ತಿ ಮೇಲೆ ಮಚ್ಚು ಲಾಂಗ್‌ನಿಂದ ಹಲ್ಲೆ ಮಾಡಿದ್ದಾರೆ ಎಂದು ಸುದ್ದಿ ಮಾಡಲಾಗಿದೆ. ಎರಡೂ ಸ್ಥಳಗಳಿಗೆ ನಾನು ಭೇಟಿ ಮಾಡಿ ಪರಿಶೀಲಿಸಿದ್ದೇನೆ. ಎಂಆರ್‌ಪಿಎಲ್‌ನದ್ದು ಸುಳ್ಳು ಸುದ್ದಿ. ಅದೇರೀತಿ ಇಂದು ಬೆಳಗ್ಗೆ ಆದ ಘಟನೆಯಲ್ಲೂ ನಾನು ಆ ವ್ಯಕ್ತಿಯನ್ನು ಮಾತನಾಡಿಸಿದ್ದೇನೆ. ಆ ವ್ಯಕ್ತಿ ತಾನು ಆ ರಸ್ತೆಯಲ್ಲಿ ಓಡಾಡುತ್ತಿರುತ್ತೇನೆ. ಯಾರಾದರೂ ತನಗೆ ದಾಳಿ ಮಾಡಬಹುದು ಎಂಬ ಆತಂಕದಲ್ಲಿ ಹೇಳಿದ್ದೇನೆ ಎಂದು ಹೇಳಿದ್ದಾನೆ. ಆ ವ್ಯಕ್ತಿ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಸ್ಥಳೀಯರನ್ನು ಕರೆಸಿ ಪರಿಶೀಲಿಸಲಾಗುತ್ತಿದೆ. ಅಧಿಕಾರಿ ಸಿಬ್ಬಂದಿ ಕಣ್ಗಾವಲಿನಲ್ಲಿ ಬಂದೋಬಸ್ತ್ ಮಾಡಲಾಗಿದೆ. ಎಲ್ಲರೂ ಧೈರ್ಯದಿಂದ ಓಡಾಡಬಹುದು ಎಂದು ಜನರಲ್ಲಿ ಧೈರ್ಯ ತುಂಬಿದ್ದಾರೆ.
ಆದರೆ ಈ ರೀತಿಯ ಸುದ್ದಿಗಳು ಬಂದಾಗ ಪ್ರಸಾರ ಮಾಡುವ ಮೊದಲು ಸ್ಪಷ್ಟನೆ ಪಡೆಯಬೇಕು. ಜಿಲ್ಲೆಯಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವಲ್ಲಿ ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ. ಜಿಲ್ಲಾಡಳಿತ ಸಹಕರಿಸುತ್ತಿದೆ. ಸಾರ್ವಜನಿಕರು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದವರು ಪರಿಸ್ಥಿತಿ ಸಹಜವಾಗಲು ಪ್ರಯತ್ನಿಸಬೇಕು. ನಿಷೇಧಾಜ್ಞೆ ಇರುವಾಗ ತೊಂದರೆ ಆಗುವುದು ಸಾಮಾನ್ಯ ಜನರಿಗೆ. ಹಾಗಾಗಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮನವಿ ಮಾಡಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆಗಳ ಪ್ರಕರಣಗಳ ಪತ್ತೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡದ ರೀತಿಯಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಮೂರು ಶಿಫ್ಟ್‌ಗಳಲ್ಲಿ ನಮ್ಮ ಸ್ಥಳೀಯ ಅಧಿಕಾರಿ ಸಿಬ್ಬಂದಿ ಹಾಗೂ ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿ ಸಿಬ್ಬಂದಿ, ಕೆಎಸ್‌ಆರ್‌ಪಿ ಪ್ರತಿಯೊಬ್ಬರನ್ನೂ ಬಳಸಿಕೊಂಡು ನಾವು ಉತ್ತಮರ ರೀತಿಯಲ್ಲಿ ಬಂದೋಬಸ್ತ್ ಮಾಡಿದ್ದೇವೆ. ಅದರ ಜತೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅಂಗಡಿ ಮುಂಗಟ್ಟು ಬಂದ್ ಮಾಡಲು ಆದೇಶ ಮಾಡಿರುವುದು, ಮದ್ಯ ನಿಷೇಧ ಮಾಡಿ ಎಲ್ಲಾ ರೀತಿಯಿಂದ ಜಿಲ್ಲಾಡಳಿತ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.