ಮಂಗಳೂರು | ಆ.6ರಂದು ಅಳಿವಿನಂಚಿನ ಭಾಷೆ-ರಾಷ್ಟ್ರೀಯ ವಿಚಾರಗೋಷ್ಠಿ

ಮಂಗಳೂರು, ಆ.3: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಸಂಪಾದಿಸಿರುವ ಅರೆಭಾಷೆ ಪದಕೋಶ, ಅರೆಭಾಷೆ-ಕನ್ನಡ-ಇಂಗ್ಲಿಷ್ ತ್ರಿಭಾಷಾ ಡಿಕ್ಷನರಿ ಬಿಡುಗಡೆ ಕಾರ್ಯಕ್ರಮ ಮತ್ತು ಅಳಿವಿನಂಚಿನ ಭಾಷೆ-ರಾಷ್ಟ್ರೀಯ ವಿಚಾರಗೋಷ್ಠಿ ಆ.6ರಂದು ಪೂರ್ವಾಹ್ನ 10:30ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಹಾಗೂ ಸಂತ ಅಲೋಶಿಯಸ್ ಕಾಲೇಜು ಮಂಗಳೂರು, ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್, ಸಿಐಎಸ್-ಎ2ಕೆ ಬೆಂಗಳೂರು ಇದರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಪದಕೋಶ ಬಿಡುಗಡೆ ಮಾಡುವರು. ಮದ್ರಾಸು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಚೆ.ರಾಮಸ್ವಾಮಿ ಪದಕೋಶದ ಕುರಿತಂತೆ ಮಾತನಾಡವರು. ಸಂತ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ರೆ.ಫಾ.ಮೆಲ್ವಿನ್ ಜೋಸ್ ಪಿಂಟೋ ಎಸ್.ಜೆ. ಆಶೀರ್ವಚನ ನೀಡುವರು ಎಂದವರು ತಿಳಿಸಿದರು.
ಅಪರಾಹ್ನ 1:30ರ ನಂತರ ‘ಅಳಿವಿನಂಚಿನಲ್ಲಿರುವ ಸಣ್ಣ ಭಾಷೆಗಳು ಮತ್ತು ಡಿಕ್ಷನರಿ’ ವಿಷಯದ ಕುರಿತಂತೆ ಪ್ರೊ.ಚೆ.ರಾಮಸ್ವಾಮಿ, ‘ಅಳಿವಿನಂಚಿನ ಭಾಷೆ ಮತ್ತು ಯೋಜನೆಗಳು’ ವಿಷಯದ ಕುರಿತಂತೆ ವಿಕಿಮೀಡಿಯ ಫೌಂಡೇಶನ್ ಉದ್ಯೋಗಿ ತನ್ವೀರ್ ಹಸನ್, ಡಿಜಿಟಲೀಕರ್ ಮುಕ್ತಜ್ಞಾನ, ಯುನಿಕೋಡ್ ಮತ್ತು ಭಾಷೆ ವಿಷಯದ ಕುರಿತಂತೆ ಸಂಪನ್ಮೂಲ ವ್ಯಕ್ತಿ ಓಂ ಪ್ರಕಾಶ್ ಮಾತನಾಡಲಿದ್ದಾರೆ.
ಸಂಜೆ 3:45ರಿಂದ ತುಳು ವಿಕಿಪೀಡಿಯ ಸಾಧನೆ ಮತ್ತು 7ನೇ ವರ್ಷದ ಸಂಭ್ರಮದ ಬಗ್ಗೆ ಡಾ.ವಿಶ್ವನಾಥ ಬದಿಕಾನ ಮಾತನಾಡುವರು. ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ವಿವರ ನೀಡಿದರು. ಪ್ರಸಕ್ತ ಅರೆಭಾಷೆ ಪದಕೋಶದಲ್ಲಿ 1,500ಕ್ಕಿಂತ ಹೆಚ್ಚು ಗಾದೆಗಳು, 750ಕ್ಕಿಂತ ಹೆಚ್ಚು ಒಗಟುಗಳ ನುಡಿಗಟ್ಟುಗಳು ಹಾಗೂ 18 ಸಾವಿರ ಪದಗಳಿಗೂ ಪ್ರಯೋಗ ವಾಕ್ಯಗಳನ್ನು ನೀಡಲಾಗಿದೆ. ಪದಕೋಶದಲ್ಲಿ 900ಕ್ಕಿಂತ ಹೆಚ್ಚು ಮನೆತನ, 1,000ಕ್ಕಿಂತ ಹೆಚ್ಚು ಸ್ಥಳನಾಮ ಹಾಗೂ 150ಕ್ಕಿಂತ ಹೆಚ್ಚು ವ್ಯಕ್ತಿನಾಮಗಳು ಇವೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಯೋಜಕರಾದ ಡಾ.ವಿಶ್ವನಾಥ ಬದಿಕಾನ, ಭರತೇಶ ಅಲಸಂಡೆಮಜಲು, ಅಲೋಶಿಯಸ್ ಸ್ವಾಯತ್ತ ಕಾಲೇಜೀನ ರಿಜಿಸ್ಟ್ರಾರ್ ಡಾ.ಆಲ್ವಿನ್ ಡೇಸಾ ಉಪಸ್ಥಿತರಿದ್ದರು.