VIDEO | ಬಡವರ ಪರವಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿಯಿದೆ: ಸಿದ್ದರಾಮಯ್ಯ

ಬೆಂಗಳೂರು: ಬಡವರ ಕಣ್ಣೀರು ಒರೆಸಿದಾಗ ಮಾತ್ರ ಪ್ರಾಮಾಣಿಕ ರಾಜಕಾರಣಿಗೆ ಖುಷಿಯಾಗುತ್ತದೆ. ಐದು ವರ್ಷ ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಧರ್ಮ, ಜಾತಿಯ ಬಡವರ ಪರವಾಗಿ ಕೆಲಸ ಮಾಡಿದ್ದೇನೆ ಎಂಬ ತೃಪ್ತಿಯಿದೆ. ರಾಜ್ಯದ ಜನರಿಂದ ಪ್ರೀತಿ, ವಿಶ್ವಾಸ, ಅಭಿಮಾನ ಮಾತ್ರ ನಿರೀಕ್ಷಿಸುತ್ತೇನೆ. ಅಲ್ಲದೆ, ಇಲ್ಲಿ ಅಧಿಕಾರದಲ್ಲಿರುವ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಜನರಲ್ಲಿ ಮನವಿ ಮಾಡುತ್ತೇನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ 75ನೇ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಆಯೋಜನೆ ಮಾಡಿರುವ ‘ಸಿದ್ದರಾಮಯ್ಯ ಅಮೃತ ಮಹೋತ್ಸವ’ ಕಾರ್ಯಕ್ರಮದ ಅಂಗವಾಗಿ ‘ವಾರ್ತಾಭಾರತಿ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ವಿಶೇಷ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ
► ದ್ರಾವಿಡ ಚಳವಳಿ-ಬಿಜೆಪಿಗೆ ಬ್ರೇಕ್
ತಮಿಳುನಾಡಿನಲ್ಲಿ ಪೆರಿಯಾರ್ ದ್ರಾವಿಡ ಚಳವಳಿ ಪ್ರಾರಂಭಿಸಿದರು. ಅಣ್ಣಾದೊರೈ, ಕರುಣಾನಿಧಿ, ಎಂ.ಜಿ. ರಾಮಚಂದ್ರನ್ ಸೇರಿದಂತೆ ಅನೇಕರು ಅದರಲ್ಲಿ ಭಾಗಿಯಾಗಿದ್ದರು. ಜನರಲ್ಲಿ ಮೌಢ್ಯಗಳ ವಿರುದ್ಧ, ವೈಚಾರಿಕ ಮನೋ
ಭಾವನೆ ಬೆಳೆಸಲು ಪೆರಿಯಾರ್ ಪ್ರಯತ್ನಿಸಿದರು. ಅಲ್ಲಿನ ಜನ ಪೆರಿಯಾರ್, ಆಚಾರ, ಚಿಂತನೆಗಳನ್ನು ಜೀವಂತವಾಗಿಟ್ಟಿದ್ದಾರೆ. ಆದುದರಿಂದ, ಅಲ್ಲಿ ಇವತ್ತಿನವರೆಗೆ ಕೋಮುವಾದಿಗಳು ಕಾಲಿಡಲು ಆಗಲಿಲ್ಲ. ಬಿಜೆಪಿ ಬೆಳೆಯಲು ಸಾಧ್ಯವಾಗಿಲ್ಲ.
ತಮಿಳುನಾಡಿನ ವಿಸಿಕೆ ಪಕ್ಷ ಅಂಬೇಡ್ಕರ್‌ವಾದದಲ್ಲಿ ನಂಬಿಕೆ ಇಟ್ಟಿರುವುದು. 2007-08ರಿಂದ ಅಂಬೇಡ್ಕರ್ ಸುಡರ್ ಸೇರಿದಂತೆ ಇನ್ನಿತರ ಪ್ರಶಸ್ತಿಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಈ ಬಾರಿ ನನಗೆ ‘ಅಂಬೇಡ್ಕರ್ ಸುಡರ್’ ಪ್ರಶಸ್ತಿ ನೀಡಿದರು. ನಾನು ಸಾಮಾನ್ಯವಾಗಿ ಪ್ರಶಸ್ತಿಗಳನ್ನು ಸ್ವೀಕರಿಸುವುದು ಕಡಿಮೆ, ಅಂಬೇಡ್ಕರ್ ಹೆಸರಿನಲ್ಲಿ ಪ್ರಶಸ್ತಿ ಇದ್ದುದ್ದರಿಂದ ಅದನ್ನು ಗೌರವಯುತವಾಗಿ ಸ್ವೀಕರಿಸಿದ್ದೇನೆ.
► ಆರೆಸ್ಸೆಸ್ ಸ್ವಾತಂತ್ರ್ಯದ ಫಲಾನುಭವಿ
ಕೋಮುವಾದಿಗಳು ಭಾವನಾತ್ಮಕ ವಿಚಾರ, ಹಿಂದುತ್ವದ ವಿಚಾರವನ್ನು ಮುಂದಿಟ್ಟುಕೊಂಡು ಇಲ್ಲಿ ನೆಲೆಯೂರಲು ಪ್ರಯತ್ನಿಸಿದ್ದಾರೆ. ಆದರೆ, ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ಗಟ್ಟಿಯಾಗಿ ನೆಲೆಯೂರಿರುವುದರಿಂದ ಅಲ್ಲಿ ಸಾಧ್ಯವಾಗಿಲ್ಲ. ನಾವು ಸ್ವತಂತ್ರ ಭಾರತೀಯರಾಗಿದ್ದೇವೆ ಅಂದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ಚಳವಳಿ, ಹೋರಾಟ ಕಾರಣ. ಬಿಜೆಪಿಯವರು ಎಂದಿಗೂ ಹೋರಾಟ ಮಾಡಿಲ್ಲ, ಆರೆಸ್ಸೆಸ್ ಸ್ವಾತಂತ್ರ್ಯದ ಹೋರಾಟದಲ್ಲಿ ಇರಲಿಲ್ಲ. ಅವರು ಸ್ವಾತಂತ್ರ್ಯದ ಫಲಾನುಭವಿಗಳು.
► ಬಿಜೆಪಿ ಅಂದರೆ ಸುಳ್ಳು
ಬಿಜೆಪಿಯವರು ಕೇವಲ ಸುಳ್ಳು ಹೇಳಲ್ಲ, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಯುವಕರ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನರೇಂದ್ರ ಮೋದಿ, ಕಪ್ಪುಹಣ ವಾಪಸ್, ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಬೆಲೆ ಏರಿಕೆ ನಿಯಂತ್ರಣ, ಅಚ್ಛೇದಿನ್ ಬರುತ್ತೆ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ಆದರೆ, ಮನಮೋಹನ್ ಸಿಂಗ್ ಸರಕಾರದಲ್ಲಿ ಇದ್ದಂತಹ ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಿಂತ ಈಗ ಮೋದಿ ಆಡಳಿತದಲ್ಲಿ ದ್ವಿಗುಣವಾಗಿದೆ.
► ಕಾರ್ಪೊರೇಟ್ ಹಿಡಿತದಲ್ಲಿ ಮಾಧ್ಯಮ
ಜನರಿಗೆ ಸತ್ಯ ತಿಳಿಸಬೇಕಾದ ಮಾಧ್ಯಮಗಳು ಈಗ ಕಾರ್ಪೊರೇಟ್ ವರ್ಗದ ಕೈಯಲ್ಲಿವೆ. ಕಾರ್ಪೊರೇಟ್‌ನ ದೊಡ್ಡ ವರ್ಗ ಬಿಜೆಪಿ ಪರವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ, ಸಿಬಿಐ, ಐಟಿ, ಈ.ಡಿ.ಯನ್ನು ಬಳಸಿಕೊಂಡು ಮಾಧ್ಯಮದವರು, ರಾಜಕಾರಣಿಗಳು, ವಿರೋಧ ಪಕ್ಷದವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ.
► ವಿಪಕ್ಷದವರು ಚುನಾವಣೆಗೆ ಸ್ಪರ್ಧಿಸಲಾಗದ ಪರಿಸ್ಥಿತಿ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಎಫ್‌ಐಆರ್ ಇಲ್ಲದ, ಮುಚ್ಚಿ ಹೋಗಿರುವ ಪ್ರಕರಣವನ್ನು ತೆರೆದು ಈ.ಡಿ.ಮೂಲಕ ವಿಚಾರಣೆ ಮಾಡಿಸಲಾಗುತ್ತಿದೆ. ಇವರಿಗೆ ನೆಲದ ಕಾನೂನಿನ ಮೇಲೆ ಗೌರವ ಇದೆಯೇ? ವಿರೋಧ ಪಕ್ಷದವರು ಚುನಾವಣೆ ನಡೆಸಲು ಆಗದೆ ಇರುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಪ್ರಧಾನಿ ಹುದ್ದೆಯನ್ನೇ ತಿರಸ್ಕರಿಸಿದ ಸೋನಿಯಾ ಗಾಂಧಿ ಮನಿಲಾಂಡ್ರಿಂಗ್ ಮಾಡಲು ಹೋಗುತ್ತಾರೆಯೇ?
► ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಬೇಡ
ರಾಜ್ಯದಲ್ಲಿ ಈ ಮಟ್ಟಿನ ಕೋಮು ಸಂಘರ್ಷ ಇರಲಿಲ್ಲ. ಹಿಜಾಬ್, ಹಲಾಲ್, ಅಝಾನ್ ವಿಚಾರಗಳು ಇತ್ತೀಚಿನದ್ದೇ? ಶತಮಾನಗಳಿಂದಲೂ ಆಚರಣೆಯಲ್ಲಿದೆ. ಮುಸ್ಲಿಮರು ತಮ್ಮ ಸಂಪ್ರದಾಯ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಹಿಂದೂಗಳು, ಕ್ರೈಸ್ತರು ತಮ್ಮ ತಮ್ಮ ಸಂಪ್ರದಾಯ, ಆಚಾರ, ವಿಚಾರಗಳನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ. ಸಂವಿಧಾ ನವೇ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಜನರ ವೈಯಕ್ತಿಕ ಬದುಕಿನಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು.
ಪರಿಹಾರದಲ್ಲಿ ತಾರತಮ್ಯ ಬೇಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೀಡಾದ ಪ್ರವೀಣ್ ಅವರ ಮನೆಗೆ ಭೇಟಿ ನೀಡಿ, ಪರಿಹಾರ ನೀಡುವ ಮುಖ್ಯಮಂತ್ರಿ, ಮಸೂದ್ ಹಾಗೂ ಫಾಝಿಲ್ ಅವರಿಗೆ ಪರಿಹಾರ ಘೋಷಣೆ ಮಾಡದೆ ಇರುವುದು ನೋಡಿದರೆ ಅವರು ಧರ್ಮಾಧಾರಿತ ರಾಜಕಾರಣ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರವೀಣ್, ಮಸೂದ್, ಫಾಝಿಲ್ ಎಲ್ಲರೂ ಮನುಷ್ಯರೇ. ಪ್ರವೀಣ್ ಕುಟುಂಬದವರಿಗೆ 25 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದಂತೆ, ಅವರಿಗೂ ಪರಿಹಾರ ನೀಡಲಿ. ಇದರಲ್ಲಿಯೂ ತಾರತಮ್ಯ ಮಾಡಿದರೆ ಅವರು ಮುಖ್ಯಮಂತ್ರಿ ಆಗಲು ಲಾಯಕ್ಕಿಲ್ಲ.
► ‘ಎನ್‌ಕೌಂಟರ್’ ಸಚಿವರ ವಿರುದ್ಧ ಕ್ರಮ
ಪ್ರವೀಣ್ ಹತ್ಯೆ ಬೆನ್ನಲ್ಲೇ ಆರೋಪಿಗಳನ್ನು ‘ಎನ್‌ಕೌಂಟರ್’ ಮಾಡುತ್ತೇವೆ ಎಂದು ಹೇಳಿರುವ ಮಂತ್ರಿ ವಿರುದ್ಧ ತಕ್ಷಣ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಒಬ್ಬ ಮಂತ್ರಿಯಾಗಿ ಎಲ್ಲರಿಗೂ ರಕ್ಷಣೆ ನೀಡಬೇಕಾದ್ದು ಅವರ ಕರ್ತವ್ಯ. ತಪ್ಪು ಮಾಡಿದವರಿಗೆ ಕಾನೂನು ರೀತಿ ಶಿಕ್ಷೆ ಕೊಡಬೇಕು. ಆದರೆ, ಎನ್‌ಕೌಂಟರ್ ಮಾಡುವುದಾಗಿ ಸರಕಾರ ಹೇಳುವುದು ಅಕ್ಷಮ್ಯ ಅಪರಾಧ.
► ಪರೇಶ್ ಮೇಸ್ತ ಪ್ರಕರಣ ಏನಾಯಿತು?
ನಮ್ಮ ಸರಕಾರದ ಅವಧಿಯಲ್ಲಿ 23 ಜನ ಕೋಮುಗಲಭೆಗಳಲ್ಲಿ ಸತ್ತಿದ್ದರು. ಅದರಲ್ಲಿ 12 ಜನ ಮುಸ್ಲಿಮರು, 11 ಮಂದಿ ಹಿಂದೂಗಳು. ಎಲ್ಲ ಪ್ರಕರಣಗಳಲ್ಲಿಯೂ ನಾವು ಕಾನೂನು ರೀತಿ ಕ್ರಮ ಕೈಗೊಂಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್ ಮೇಸ್ತ ಎಂಬ ಯುವಕನ ಹತ್ಯೆಯಾಯಿತು. ಬಿಜೆಪಿ ಆಗ್ರಹದಂತೆ ಸಿಬಿಐ ತನಿಖೆಗೆ ವಹಿಸಲಾಯಿತು. ಈವರೆಗೆ ಯಾರನ್ನೂ ಬಂಧಿಸಿಲ್ಲ ಯಾಕೆ?
► ದಾಖಲೆ ಎಲ್ಲಿದೆ?
2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಪ್ರಚಾರಕ್ಕೆ ಬಂದಾಗ ನಮ್ಮ ಸರಕಾರವನ್ನು ‘10 ಪರ್ಸೆಂಟ್ ಸರಕಾರ’ ಎಂದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗ ಪ್ರಧಾನಿಗೆ ಪತ್ರ ಬರೆದು ‘40 ಪರ್ಸೆಂಟ್’ ಬಗ್ಗೆ ಆಪಾದನೆ ಮಾಡಿದ್ದಾರೆ. ಈ ಬಗ್ಗೆ ಪ್ರಸ್ತಾಪಿಸಿದರೆ ಮುಖ್ಯಮಂತ್ರಿ ನಮ್ಮ ಬಳಿ ದಾಖಲೆ ಕೇಳುತ್ತಾರೆ. ಈ ಸರಕಾರದ ವಿರುದ್ಧ ಕೆಂಪಣ್ಣ ಪತ್ರ ಬರೆದಿರುವುದು ದಾಖಲೆ ಅಲ್ಲವೇ. ನಮ್ಮ ವಿರುದ್ಧ ಪ್ರಧಾನಿ ಮಾಡಿದ ಆಪಾದನೆಗೆ ಯಾವ ದಾಖಲೆ ಇದೆ?
► ಗುಜರಾತ್‌ನಲ್ಲಿ ಎಸಿಬಿ ಇಲ್ಲಾ?
ಮೋದಿ ಪ್ರಧಾನಿಯಾಗಿ 8 ವರ್ಷ ಆಯ್ತು. ಈವರೆಗೆ ಲೋಕಪಾಲ್ ಯಾಕೆ ರಚನೆಯಾಗಿಲ್ಲ. ಲೋಕಾಯುಕ್ತ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವ ನೈತಿಕತೆ ಇದೆ. ನಾವು ಲೋಕಾಯುಕ್ತ ದುರ್ಬಲಗೊಳಿಸಿಲ್ಲ. ಅದು ಈಗಲೂ ಇದೆ. ಎಸಿಬಿ ಭ್ರಷ್ಟಾಚಾರ ತಡೆಗಟ್ಟಲು ಇರುವ ತನಿಖಾ ಸಂಸ್ಥೆ.
► ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೇ?
ಮನೆಯ ಯಜಮಾನ ಭ್ರಷ್ಟನಾದರೆ ಪೊಲೀಸರು ಏನು ಮಾಡುತ್ತಾರೆ. 50, 60 ಲಕ್ಷ ರೂ.ಕೊಟ್ಟು ಇನ್‌ಸ್ಪೆಕ್ಟರ್, 70 ಲಕ್ಷ ರೂ.ಕೊಟ್ಟು ಎಸಿಪಿ, 1 ಕೋಟಿ ರೂ.ಕೊಟ್ಟು ಡಿಸಿಪಿಯಾದರೆ, ಅವರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೇ?
► ಕಾಕತಾಳೀಯ ಅಷ್ಟೇ
ನಾನು ಯಾವತ್ತೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ನನ್ನ ಸ್ನೇಹಿತರು, ಹಿತೈಷಿಗಳು ಸೇರಿ ನನಗೆ ಆಗಸ್ಟ್ 1ರಂದು 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, 44 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವುದರಿಂದ ಅದರ ಸ್ಮರಣಾರ್ಥ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಚುನಾವಣಾ ವರ್ಷ ಹಾಗೂ ನನಗೆ 75 ವರ್ಷ ತುಂಬುತ್ತಿರುವುದು ಕಾಕತಾಳೀಯ ಅಷ್ಟೇ.
► ಭಿನ್ನಾಭಿಪ್ರಾಯ ಇಲ್ಲ
ಈ ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬರುತ್ತಿದ್ದಾರೆ. ಇದು ಚುನಾವಣಾ ವರ್ಷ ಆಗಿರುವುದರಿಂದ, ಬೇರೆಯವರನ್ನು ಕರೆದಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರ 77ನೆ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಕರೆದಿದ್ದರು, ನಾನು ಹೋಗಿ ಅವರಿಗೆ ಶುಭ ಕೋರಿ ಬಂದೆ. ಈ ಕಾರ್ಯಕ್ರಮದಿಂದ ರಾಜಕೀಯವಾಗಿ ಪಕ್ಷಕ್ಕೆ ಲಾಭ ಆಗಿಯೇ ಆಗುತ್ತದೆ. ಆದರೆ, ಇದು ಪಕ್ಷದ ವತಿಯಿಂದ ನಡೆಸುತ್ತಿರುವ ಕಾರ್ಯಕ್ರಮವಲ್ಲ. ಅಲ್ಲದೆ, ಈ ಕಾರ್ಯಕ್ರಮದ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ.







