ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದಲ್ಲಿ ಮುಂದೆಯೂ ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು ಕೊಡುತ್ತೇವೆ: ರಾಹುಲ್ ಗಾಂಧಿ
''ಸಿದ್ದರಾಮಯ್ಯರನ್ನು ಒಬ್ಬ ವ್ಯಕ್ತಿಯಾಗಿ ಅಷ್ಟೇ ಅಲ್ಲದೆ ವಿಚಾರದಲ್ಲೂ ಇಷ್ಟ ಪಡುತ್ತೇನೆ''

ದಾವಣಗೆರೆ, ಆ.3: 'ಪ್ರಪಂಚದ ಭೂಪಟದಲ್ಲಿ ಕರ್ನಾಟಕ ರಾಜ್ಯವನ್ನು ಎದ್ದು ಕಾಣುವಂತೆ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ರಾಜ್ಯದ ಜನತೆ ಯಾವುದೇ ಭಯವಿಲ್ಲದೆ ಬದುಕುತ್ತಿದ್ದರು. ಯಾವುದೇ ಉದ್ಯಮ, ವ್ಯಾಪಾರ ವೃದ್ಧಿಗೆ ಶಾಂತಿ ಹಾಗೂ ಸಾಮರಸ್ಯ ಮುಖ್ಯ. ಹೀಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಮುಂದೆಯೂ ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು ಕೊಡುತ್ತೇವೆ' ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೆ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರಕಾರವನ್ನು ತೊಲಗಿಸಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಆ ನಿಟ್ಟಿನಲ್ಲಿ ಎಲ್ಲ ಮುಖಂಡರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಬಿಜೆಪಿ ಮತ್ತು ಆರೆಸ್ಸೆಸ್ ನ ದ್ವೇಷದ ರಾಜಕಾರಣವನ್ನು ಸೋಲಿಸಬೇಕು' ಎಂದು ಕರೆ ನೀಡಿದರು.
‘ಮೋದಿ ಸರಕಾರ ಮಾಡಿದ್ದ ಗರಿಷ್ಠ ಮೊತ್ತದ ನೋಟು ರದ್ದತಿಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದರು. ಈ ಕ್ರಮದ ಹಿಂದಿನ ಉದ್ದೇಶ ಕೆಲವೇ ಕೆಲ ಉದ್ಯಮಿಗಳಿಗೆ ಹಣ ವರ್ಗಾವಣೆ ಮಾಡುವುದೇ ಆಗಿತ್ತು. ಕಾರ್ಮಿಕರು, ರೈತರನ್ನು ನಾಶ ಮಾಡಲೆಂದೇ ಜಿಎಸ್ಟಿ ಜಾರಿ ಮಾಡಿದರು' ಎಂದು ದೂರಿದ ರಾಹುಲ್ ಗಾಂಧಿ, ‘ಸಾಮಾನ್ಯವಾಗಿ ನಾನು ಹುಟ್ಟುಹಬ್ಬಗಳಲ್ಲಿ ಭಾಗವಹಿಸುವುದಿಲ್ಲ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯನವರೊಂದಿಗಿನ ವಿಶೇಷ ಬಾಂಧವ್ಯ ಕಾರಣ. ನಾನು ಅವರನ್ನು ಒಬ್ಬ ವ್ಯಕ್ತಿಯಾಗಿ ಅಷ್ಟೇ ಅಲ್ಲದೆ ವಿಚಾರದಲ್ಲೂ ಇಷ್ಟ ಪಡುತ್ತೇನೆ. ಬಡವರ ಬಗ್ಗೆ ಸಿದ್ದರಾಮಯ್ಯನವರಿಗೆ ಇರುವ ಸಹಾನುಭೂತಿ ಮೆಚ್ಚುವಂತಹದ್ದು' ಎಂದು ಗುಣಗಾನ ಮಾಡಿದರು.







