ಜುಲೈನಲ್ಲಿ ಸಿಯುಇಟಿ ಯುಜಿ ಪರೀಕ್ಷೆ ತಪ್ಪಿಸಿಕೊಂಡವರಿಗೆ ಎರಡನೇ ಅವಕಾಶ
ಹೊಸದಿಲ್ಲಿ,ಆ.3: ಕೊನೆಯ ಕ್ಷಣದಲ್ಲಿ ಕೇಂದ್ರಗಳ ಬದಲಾವಣೆ ಮತ್ತು ರದ್ದತಿಗಳಿಂದಾಗಿ ಜುಲೈನಲ್ಲಿ ಮೊದಲ ಹಂತದ ಪ್ರಪ್ರಥಮ ಕೇಂದ್ರೀಯ ವಿವಿ ಪ್ರವೇಶ ಪರೀಕ್ಷೆ ಪದವಿಪೂರ್ವ (ಸಿಯುಇಟಿ ಯುಜಿ) ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದ ಅಭ್ಯರ್ಥಿಗಳು ಆ.4ರಿಂದ ಆರಂಭಗೊಳ್ಳುವ ಎರಡನೇ ಹಂತದಲ್ಲಿ ಇನ್ನೊಂದು ಅವಕಾಶವನ್ನು ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆಯನ್ನು ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಮಂಳವಾರ ಆ.4,5 ಮತ್ತು 6ರಂದು ನಡೆಯಲಿರುವ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳಿಗಾಗಿ ಪ್ರವೇಶ ಪತ್ರಗಳನ್ನು ಬಿಡುಗಡೆಗೊಳಿಸಿದೆ. ಆ.6ರ ಬಳಿಕ ನಡೆಯುವ ಪರೀಕ್ಷೆಗಳಿಗಾಗಿ ಪ್ರವೇಶ ಪತ್ರಗಳನ್ನು ನಂತರ ನೀಡಲಾಗುವುದು.
ನೆರೆಯಿಂದಾಗಿ ತೊಂದರೆಗೊಳಗಾದವರು ಮತ್ತು ಈ ಅವಧಿಯಲ್ಲಿ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲಿರುವ ಅಭ್ಯರ್ಥಿಗಳಿಗಾಗಿ ಪರೀಕ್ಷೆಗಳನ್ನು ಆ.4,5 ಮತ್ತು 6ರಿಂದ ಆ.12,13 ಮತ್ತು 14ಕ್ಕೆ ಮುಂದೂಡಲಾಗಿದೆ ಎಂದೂ ಎನ್‌ಟಿಎ ಪ್ರಕಟಿಸಿದೆ.
ತಾಂತ್ರಿಕ ಸಮಸ್ಯೆಗಳಿಂದಾಗಿ ಪ.ಬಂಗಾಳದ ನ್ಯೂ ಜಲಪೈಗುರಿ ಮತ್ತು ಪಂಜಾಬಿನ ಪಠಾಣಕೋಟ ಕೇಂದ್ರಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಈ ಕೇಂದ್ರಗಳಲ್ಲಿ ಪರೀಕ್ಷೆಯನ್ನು ತಪ್ಪಿಸಿಕೊಂಡವರು ಈಗ ಹಾಜರಾಗಬಹುದು ಎಂದು ಎನ್‌ಟಿಎ ತಿಳಿಸಿದೆ.







