ಸಿದ್ದರಾಮಯ್ಯ ‘ಅಮೃತ ಮಹೋತ್ಸವ': ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಮುಖಂಡರ ಸಂಕಲ್ಪ

ಬೆಂಗಳೂರು/ದಾವಣಗೆರೆ, ಆ.3: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೆ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 10 ಲಕ್ಷ ಮಂದಿಯ ಜನ ಸಾಗರವೇ ಹರಿದು ಬಂದಿತ್ತು. ತಮ್ಮ ನಾಯಕನ ಹುಟ್ಟುಹಬ್ಬವನ್ನು ಕಣ್ತುಂಬಿಕೊಳ್ಳುವ ಮೂಲಕ ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ‘ಶಕ್ತಿ ಪ್ರದರ್ಶನ' ಮಾಡಿದ್ದು ವಿಶೇಷವಾಗಿತ್ತು.
ದಾವಣಗೆರೆ ಹೊರವಲಯದ ಕುಂದವಾಡದಲ್ಲಿನ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಏರ್ಪಡಿಸಿದ್ದ ‘ಸಿದ್ದರಾಮಯ್ಯ 75 ಅಮೃತಮಹೋತ್ಸವ’ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯಿಂದ ಹಿಡಿದು ಅತ್ತ ಬೀದರ್, ಇತ್ತ ಬೆಳಗಾವಿ, ಬಯಲುಸೀಮೆ ಗಡಿ ಕೋಲಾರ ಜಿಲ್ಲೆಯೂ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ನಾಲ್ಕು ಸಾವಿರದಷ್ಟು ಬಸ್‍ಗಳು, ಆರೇಳು ಸಾವಿರದಷ್ಟು ಕಾರುಗಳು, ನೂರಾರು ಟಿಟಿಗಳು ಹಾಗೂ ದ್ವಿಚಕ್ರ ವಾಹನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಸಾಕ್ಷಿಯಾದರು.
‘ಪ್ರಪಂಚದ ಭೂಪಟದಲ್ಲಿ ಕರ್ನಾಟಕ ರಾಜ್ಯವನ್ನು ಎದ್ದು ಕಾಣುವಂತೆ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ರಾಜ್ಯದ ಜನತೆ ಯಾವುದೇ ಭಯವಿಲ್ಲದೆ ಬದುಕುತ್ತಿದ್ದರು. ಯಾವುದೇ ಉದ್ಯಮ, ವ್ಯಾಪಾರ ವೃದ್ಧಿಗೆ ಶಾಂತಿ ಹಾಗೂ ಸಾಮರಸ್ಯ ಮುಖ್ಯ. ಹೀಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಮುಂದೆಯೂ ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು ಕೊಡುತ್ತೇವೆ' ಎಂದು ರಾಹುಲ್‍ಭರವಸೆ ನೀಡಿದರು.
‘ಮೋದಿ ಸರಕಾರ ಮಾಡಿದ್ದ ಗರಿಷ್ಠ ಮೊತ್ತದ ನೋಟು ರದ್ಧತಿಯಿಂದ ಜನತೆ ಸಂಕಷ್ಟಕ್ಕೆ ಸಿಲುಕಿದರು. ಈ ಕ್ರಮದ ಹಿಂದಿನ ಉದ್ದೇಶ ಕೆಲವೇ ಕೆಲ ಉದ್ಯಮಿಗಳಿಗೆ ಹಣ ವರ್ಗಾವಣೆ ಮಾಡುವುದೇ ಆಗಿತ್ತು. ಕಾರ್ಮಿಕರು, ರೈತರನ್ನು ನಾಶ ಮಾಡಲೆಂದೇ ಜಿಎಸ್ಟಿ ಜಾರಿ ಮಾಡಿದರು' ಎಂದು ದೂರಿದ ರಾಹುಲ್ ಗಾಂಧಿ, ‘ಸಾಮಾನ್ಯವಾಗಿ ನಾನು ಹುಟ್ಟುಹಬ್ಬಗಳಲ್ಲಿ ಭಾಗವಹಿಸುವುದಿಲ್ಲ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯನವರೊಂದಿಗಿನ ವಿಶೇಷ ಬಾಂಧವ್ಯ ಕಾರಣ. ನಾನು ಅವರನ್ನು ಒಬ್ಬ ವ್ಯಕ್ತಿಯಾಗಿ ಅಷ್ಟೇ ಅಲ್ಲದೆ ವಿಚಾರದಲ್ಲೂ ಇಷ್ಟ ಪಡುತ್ತೇನೆ. ಬಡವರ ಬಗ್ಗೆ ಸಿದ್ದರಾಮಯ್ಯನವರಿಗೆ ಇರುವ ಸಹಾನುಭೂತಿ ಮೆಚ್ಚುವಂತಹದ್ದು' ಎಂದು ಗುಣಗಾನ ಮಾಡಿದರು.
ಕಾರ್ಯಕ್ರಮದ ಕೇಂದ್ರಬಿಂದು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ವೇದಿಕೆಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅಲ್ಲದೆ, ಅವರ ಕೈಕುಲುಕಲು ಜನರು ಒಬ್ಬರ ಮೇಲೊಬ್ಬರು ಬಿದ್ದು ನೂಕುನುಗ್ಗಲು ಉಂಟಾಯಿತು. ಇದೇ ವೇಳೆ ಸಂಗೀತ ನಿರ್ದೇಶಕ ಸಾಧು ಕೋಕಿಲ ಮತ್ತು ಬಳಗ ವೇದಿಕೆಯಲ್ಲಿ ಸಿದ್ದರಾಮಯ್ಯನವರ ಕುರಿತ ಹಾಡು ಹಾಡುತ್ತಿದ್ದರೆ ಜನ ಹುಚ್ಚೆದ್ದು ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.
‘ಗೊಂಬೆ ಹೇಳುತೈತೆ ನೀನೇ ರಾಜಕುಮಾರ’ ಹಾಡು ಹಾಡುವಾಗ ನೆರೆದಿದ್ದ ಜನಸಮೂಹ ಮೊಬೈಲ್ ಫೋನ್ ಲೈಟ್ ಆನ್ ಮಾಡಿ ಬೆಳಕು ಹರಿಸಿ ಸಂಭ್ರಮಿಸಿದರು. ‘ಒಳಿತು ಮಾಡು ಮನುಜ, ನೀ ಇರೋದು ಮೂರು ದಿವಸ’ ಹಾಡಿಗೆ ಜನರು ಧ್ವನಿಗೂಡಿಸಿದರು. ಸಿದ್ದರಾಮಯ್ಯರ ಹುಟ್ಟುಹಬ್ಬಕ್ಕೆ ದೊಡ್ಡಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಎಸ್.ಎಸ್. ಮೈದಾನದ ಸುತ್ತಮುತ್ತಲ ಪ್ರದೇಶ, ದಾವಣಗೆರೆ ನಗರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಾಲ್ಕೈದು ಕಿ.ಮೀ ಸಂಚಾರ ದಟ್ಟಣೆ ಉಂಟಾಗಿತ್ತು.
ಸಿದ್ದು ಜತೆ ಸೆಲ್ಫಿಗೆ ಮುಗಿಬಿದ್ದ ಜನತೆ: ಸಿದ್ದರಾಮಯ್ಯನವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಕೈಕುಲುಕಲು ಹಾಗೂ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಶಾಸಕರು, ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮುಗಿಬಿದ್ದರು. ಕೆಲವರ ಕೈಕುಲುಕಿದ ಸಿದ್ದರಾಮಯ್ಯ ಅವರು, ಹಲವು ಮಂದಿಯ ಜೊತೆ ನಗು ನಗುತ್ತಲೆ ಸೆಲ್ಫಿಗೆ ಪೋಸ್ ನೀಡಿದ್ದು ನಡೆಯಿತು. ‘ಮೈಸೂರು ಹುಲಿಯಾ’, ‘ಸೆಲ್ಫ್ ಮೇಡ್ ಸಿದ್ದಣ್ಣ’ ಹಾಡುಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಊಟ-ತಿಂಡಿ ವ್ಯವಸ್ಥೆ: ‘ಸಿದ್ದರಾಮಯ್ಯರ ಹುಟ್ಟುಹಬ್ಬಕ್ಕೆ ಆಗಮಿಸಿದ ಅವರ ಅಭಿಮಾನಿಗಳು, ಕಾರ್ಯಕರ್ತರಿಗೆ ಊಟ-ಉಪಾಹಾರ ವ್ಯವಸ್ಥೆ ಕಲ್ಪಿಸಲಾಗಿದೆ. 2 ಸಾವಿರಕ್ಕೂ ಅಧಿಕ ಮಂದಿ ಅಡುಗೆ ಕೆಲಸಗಾರರು ಬೆಳಗ್ಗೆ ಬಿಸಿ ಬೇಳೆ ಬಾತ್, ಮೊಸರನ್ನು, ಮಧ್ಯಾಹ್ನ ಭೋಜನಕ್ಕೆ ಪಲಾವ್, ಮೊಸರನ್ನ ಹಾಗೂ ಮೈಸೂರು ಪಾಕ್ ಸಹಿತ ಸಿಹಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಆರ್.ವಿ.ದೇಶಪಾಂಡೆ, ಅಧ್ಯಕ್ಷ ಕೆ.ಎನ್.ರಾಜಣ್ಣ, ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರಡ್ಡಿ, ಖಜಾಂಚಿ ಬೈರತಿ ಸುರೇಶ್, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್, ಶಾಸಕರಾದ ಯು.ಟಿ.ಖಾದರ್, ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಅಂಜಲಿ ನಿಂಬಾಳ್ಕರ್, ರಹೀಮ್ ಖಾನ್ ಸೇರಿದಂತೆ ಅನೇಕ ಶಾಸಕರು, ಮಾಜಿ ಸಚಿವರು ಪಾಲ್ಗೊಂಡಿದ್ದರು.
ಖರ್ಗೆ ಗೈರು: ‘ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಸಭೆ ಪ್ರತಿಪಕ್ಷದ ನಾಯಕ ಹಾಗೂ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಾಗಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೇಶದ 12 ಕಡೆಗಳಲ್ಲಿ ದಾಳಿ ನಡೆಸಿರುವ ಬೆಳವಣಿಗೆ ಹಿನ್ನಲೆಯಲ್ಲಿ ಹಾಗೂ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅವರು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ ಎಂದು ಗೊತ್ತಾಗಿದೆ.







