ಕೋಟೇಶ್ವರ: ರಾಷ್ಟ್ರಧ್ವಜ ವಿತರಣೆಗೆ ಎಡಿಸಿ ಚಾಲನೆ

ಉಡುಪಿ, ಆ.3: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರಕಾರದ ಯೋಜನೆಯಾದ ಹರ್‌ಘರ್ ತಿರಂಗ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಮನೆಗಳಲ್ಲಿ ಆಗಸ್ಟ್ 13ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಹೇಳಿದ್ದಾರೆ.
ಬುಧವಾರ ಕೋಟೇಶ್ವರದ ಎಲ್.ಜಿ.ಇಂಡಸ್ಟ್ರೀಸ್ ಸಂಸ್ಥೆಯಲ್ಲಿ ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಸಂಸ್ಥೆಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಪರ ಜಿಲ್ಲಾಧಿಕಾರಿಗಳು ಪ್ರತಿ ಮನೆಗಳಲ್ಲಿಯೂ ಧ್ವಜ ಹಾರಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಕಾರ್ಮಿಕರಿಗೆ ರಾಷ್ಟ್ರಧ್ವಜ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಆರೋಗ್ಯ ಅಧಿಕಾರಿ ಡಾ.ಪೂರ್ಣಿಮಾ, ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯ ಯೋಗಿ ನಾಯಕ್, ಸಂಸ್ಥೆಯ ದೀಕ್ಷಾ ಕಾಮತ್ ಮತ್ತು ಹರ್ಷಾ ಕಾಮತ್ ಹಾಗೂ ಇತರರು ಉಪಸ್ಥಿತರಿದ್ದರು. ಅಶೋಕ್ ಭಂಡಾರ್ಕರ್ ಕಾರ್ಯಕ್ರಮ ನಿರೂಪಿಸಿ ಹರ್ಷಾ ಕಾಮತ್ ವಂದಿಸಿದರು.








