ಅಮೃತ ಮಹೋತ್ಸವ ನಿರೀಕ್ಷೆ ಮೀರಿ ಯಶಸ್ವಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು/ದಾವಣಗೆರೆ, ಆ. 3: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮ ನಮ್ಮೆಲ್ಲರ ನಿರೀಕ್ಷೆ ಮೀರಿ ಯಶಸ್ವಿಯಾಗಿದ್ದು, ರಾಜ್ಯದ ಇತಿಹಾಸದಲ್ಲೇ ಇದೊಂದು ಅತ್ಯಂತ ಅಪರೂಪದ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾಗಿದ್ದೀರಿ' ಎಂದು ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ನುಡಿದರು.
ಬುಧವಾರ ಇಲ್ಲಿನ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಏರ್ಪಡಿಸಿದ್ದ ಸಿದ್ದರಾಮಯ್ಯ 75ನೆ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಮಾಜಿ ಸ್ಪೀಕರ್ ಹಾಗೂ ಮಾಜಿ ಸಚಿವ ನನ್ನಂತಹವರಿಗೆ ವೇದಿಕೆಗೆ ಬರಲು ಎರಡೂವರೆ ತಾಸು ಹಿಡಿಯಿತು. ಎಲ್ಲಿ ನೋಡಿದರಲ್ಲಿ ಜನ ಸಾಗರ. ಇಲ್ಲಿ ಮಳೆ ಬೀಳುವ ವಾತಾವರಣವಿದೆ. ಆದರೂ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಇಲ್ಲಿ ಸೇರಿದ್ದಾರೆ. ಇಷ್ಟೊಂದು ಸಂಖ್ಯೆಯ ಜನರನ್ನು ಹಣ ನೀಡಿ ಕರೆಸಿಕೊಳ್ಳಲು ಸಾಧ್ಯವಿಲ್ಲ' ಎಂದು ಬಣ್ಣಿಸಿದರು.
‘ಸಿದ್ದರಾಮಯ್ಯ ಅವರು ಬರೀ ಅವರ ಕುಟುಂಬ, ಗೆಳೆಯರು, ಹಿತೈಷಿಗಳಿಗೆ ಮಾತ್ರ ಮೀಸಲಾದ ನಾಯಕರಲ್ಲ, ಅವರು ಇಡೀ ರಾಜ್ಯದ ಆಸ್ತಿ, ಅವರು ನಮಗೆಲ್ಲರಿಗೂ ಸೇರಿದವರು. ಅವರು ಕಾಲಿಗೆ ಬೀಳುವವರು, ನಮಸ್ಕಾರ ಹೊಡೆಯುತ್ತಾ ಹಿಂದೆ ಮುಂದೆ ಸುತ್ತುತ್ತಿರುವವರ ಬಗ್ಗೆ ಅವರು ಜಾಗ್ರತೆಯಿಂದ ಇರಬೇಕು. ನಾನು ಬಹಳ ಹತ್ತಿರದಿಂದ ಅವರನ್ನು ಬಲ್ಲೆ, ಅವರ ಜೊತೆಗಿನ ಒಡನಾಟ ಎಂದೂ ಮರೆಯಲಾಗದು' ಎಂದು ರಮೇಶ್ ಕುಮಾರ್ ಮೆಲುಕು ಹಾಕಿದರು.





