ಕಲ್ಯಾಣಪುರ: ಆ.7ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ
ಉಡುಪಿ: ಪದ್ಮಶಾಲಿ/ಶೆಟ್ಟಿಗಾರ ಸಮಾಜದ ಕುಲಕಸುಬು ಕೈಮಗ್ಗ ನೇಕಾರಿಕೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿ ಉಡುಪಿಯ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಆ.7ರಂದು ಕಲ್ಯಾಣಪುರದ ಶ್ರೀಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದ ಸಭಾಂಗಣದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿದೆ.
‘ನಮ್ಮ ಕೈಮಗ್ಗ ಸೀರೆ ನಮ್ಮ ಹೆಮ್ಮೆ’ ಎಂಬ ಘೋಷಣೆಯೊಂದಿಗೆ ಸಮಾಜದ ಮಹಿಳೆಯರು ಕೈಮಗ್ಗದ ಸೀರೆಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೈಮಗ್ಗದ ಸೀರೆಗಳಿಗೆ ಹೊಸ ಆಯಾಮ ನೀಡುವ, ಬಹು ಬೇಡಿಕೆಯ ಸೀರೆಗಳಾಗಿ ಪರಿವರ್ತಿಸುವ, 100 ಮಂದಿ ಕೈಮಗ್ಗದ ನೇಕಾರರು ಮತ್ತೆ ನೇಕಾರ ವೃತ್ತಿಗೆ ಮರಳುವಂತೆ ಮಾಡುವ ಯೋಜನೆ ಪ್ರತಿಷ್ಠಾನಕ್ಕಿದೆ.
ಕಾರ್ಯಕ್ರಮದಲಿ ಕೈಮಗ್ಗ ಉಡುಗೆ ತೊಡುಗೆಯಲ್ಲಿ ಸೌಂದರ್ಯ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದೆ. ಇದರಲ್ಲಿ ನೇಕಾರ ಸಿರಿ (ವೈಯಕ್ತಿಕ), ನೇಕಾರ ಸಿರಿವರ (ದಂಪತಿ) ಹಾಗೂ ನೇಕಾರ ಕುಟುಂಬ ಸಿರಿ (ತಂಡ ಸ್ಪರ್ಧೆ) ವಿಭಾಗಗಳಿರುತ್ತವೆ. ಅವಿಭಜಿತ ದ.ಕ.ಜಿಲ್ಲೆಯ ೧೬ ವೀರಭದ್ರ ದೇವಸ್ಥಾನ ಹಾಗೂ ವಲಯ ವೇದಿಕೆಗಳ ಸದಸ್ಯರು ಇದರಲ್ಲಿ ಭಾಗವಹಿಸಬಹುದು.
ಕಾರ್ಯಕ್ರಮ ಆ.7ರಂದು ಬೆಳಗ್ಗೆ 9 ಗಂಟೆಗೆ ಪ್ರಾರಂಭಗೊಳ್ಳಲಿದೆ. ಮೊದಲು ಸಂವಾದ ಕಾರ್ಯಕ್ರಮ ನಡೆಯಲಿದೆ. ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ, ಹಿರಿಯ ನೇಕಾರರಿಗೆ ಅಭಿನಂದನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಸವಿತಾ ಉಮಾಕಾಂತ್ ಶೆಟ್ಟಿಗಾರ್ ಇವರ ವಾಟ್ಸ್‌ಆಪ್ ಸಂಖ್ಯೆ ೭೩೫೩೮೭೩೫೦೭ಕ್ಕೆ ಕಳುಹಿಸಬಹುದು ಎಂದು ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.