`ಅಗ್ನಿಪಥ್' ಹೆಸರಿನಲ್ಲಿ ಕೇಸರೀಕರಣ: ಸಿಪಿಐ(ಎಂಎಲ್) ಆರೋಪ

ಬೆಂಗಳೂರು, ಆ.3: `ಅಗ್ನಿಪಥ್' ಹೆಸರಿನಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರನ್ನು ಸೇನೆಗೆ ಸೇರಿಸಿ ಕೇಸರೀಕರಣ ಮಾಡುವ ಷಡ್ಯಂತ್ರ ನಡೆಸುತ್ತಿದೆ ಎಂದು ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎನ್.ರಾಮಚಂದ್ರನ್ ಟೀಕಿಸಿದರು.
ಬುಧವಾರ ನಗರದ ಕೆಜಿ ರಸ್ತೆಯ ಶಿಕ್ಷಕರ ಸದನದಲ್ಲಿ ಬುಧವಾರ ಏರ್ಪಡಿಸಿದ್ದ ಪಕ್ಷದ 11ನೆ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ), ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ರೀತಿಯಲ್ಲಿ ಸೇನೆ ಸಹ ಆರೆಸ್ಸೆಸ್ ವಿಭಾಗ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಲ್ಲದೆ, ಬಿಜೆಪಿ ನೇತತ್ವದ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆ ದೇಶಕ್ಕೆ ಅಪಾಯ ತರಲಿದ್ದು, ಬಂಡವಾಳಶಾಹಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ, ಬಿಜೆಪಿ ಸೋಲಿಸಲು ಎಡಶಕ್ತಿಗಳು ಒಂದಾಗಬೇಕು ಎಂದು ಅವರು ಕರೆ ನೀಡಿದರು.
ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಅಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ಕ್ರಾಂತಿಕಾರಿ ಶಕ್ತಿಗಳನ್ನು ಒಗ್ಗೂಡಿಸಿ ಫ್ಯಾಸಿಸಂ ಸೋಲಿಸಬೇಕು. ಇದಕ್ಕಾಗಿ ಕಟಿಬದ್ಧವಾಗಿರುವ ಶಕ್ತಿಗಳೊಂದಿಗೆ ಸಂವಾದ ನಡೆಸಿ ಒಗ್ಗೂಡಿಸಬೇಕು. ದೇಶಪ್ರೇಮಿ ಕ್ರಾಂತಿಕಾರಿಗಳು ನಾಲ್ಕೈದು ಅಂಶಗಳ ಆಧಾರದಲ್ಲಿ ಹೋರಾಟ ನಡೆಸಿ ಜನರಿಗೆ ಶಕ್ತಿ ನೀಡಬೇಕು. ಸೆಪ್ಟೆಂಬರ್‍ನಲ್ಲಿ ಕೇರಳದಲ್ಲಿ ನಡೆಯಲಿರುವ 12ನೇ ಮಹಾಧಿವೇಶನದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ, ಆಂತರಿಕ ವಾದ-ವಿವಾದಗಳಿಗೆ ವಿರಾಮ ಹಾಕಬೇಕು. ಮಾಕ್ರ್ಸ್‍ವಾದಿಗಳು ಮತ್ತು ಅಂಬೇಡ್ಕರ್‍ವಾದಿಗಳ ನಡುವಿನ ಬಿಕ್ಕಟ್ಟು ಬಗೆಹರಿಯಬೇಕು. ಇದಕ್ಕಾಗಿ ಸಂವಾದ ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಸಮ್ಮೇಳನದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ನ್ಯಾಯವಾದಿ ಎಸ್.ಬಾಲನ್, ಮುಖಂಡರಾದ ಎಂ.ಡಿ.ಅಮೀರ್‍ಅಲಿ, ಡಿ.ಎಚ್.ಪೂಜಾರ್, ಡಿ.ಎಸ್.ನಿರ್ವಾಣಪ್ಪ, ಪೂರ್ಣಿಮಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







