ದಿಲ್ಲಿಯಲ್ಲಿ 4ನೇ ಮಂಗನ ಕಾಯಿಲೆಯ ಪ್ರಕರಣ ಪತ್ತೆ

Photo:PTI
ಹೊಸದಿಲ್ಲಿ: ದಿಲ್ಲಿಯಲ್ಲಿ ಮತ್ತೊಬ್ಬ ವಿದೇಶಿ ಪ್ರಜೆಗೆ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಇದು ನಾಲ್ಕನೇ ಪ್ರಕರಣವಾಗಿದೆ.
ರೋಗಿಯು 31 ವರ್ಷದ ಮಹಿಳೆಯಾಗಿದ್ದು, ಇತ್ತೀಚೆಗಷ್ಟೇ ಅವರು ವಿದೇಶ ಪ್ರವಾಸ ಮಾಡಿದ್ದಾರೋ ಇಲ್ಲವೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಒಟ್ಟಾರೆಯಾಗಿ, ಮಂಗನ ಕಾಯಿಲೆಯ ಒಂಬತ್ತನೇ ಪ್ರಕರಣ ಭಾರತದಲ್ಲಿ ಕಾಣಿಸಿಕೊಂಡಿದೆ. ಈ ಎಲ್ಲವೂ ಕೇರಳ ಹಾಗೂ ದಿಲ್ಲಿಯಲ್ಲಿ ಪತ್ತೆಯಾಗಿದೆ.
ಮಹಿಳೆಗೆ ಜ್ವರ ಹಾಗೂ ಚರ್ಮದಲ್ಲಿ ದದ್ದುಗಳಿದ್ದು, ಅವರನ್ನು ಲೋಕನಾಯಕ್ ಜೈ ಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಹಿಳೆಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಬುಧವಾರ ಪಾಸಿಟಿವ್ ಫಲಿತಾಂಶ ಬಂದಿದೆ.
ನಿನ್ನೆ, ಯಾವುದೇ ಇತ್ತೀಚಿನ ಪ್ರಯಾಣದ ಇತಿಹಾಸವಿಲ್ಲದ 35 ವರ್ಷದ ವಿದೇಶಿ ವ್ಯಕ್ತಿಯೊಬ್ಬರಿಗೆ ದಿಲ್ಲಿಯಲ್ಲಿ ಮಂಕಿಪಾಕ್ಸ್ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.
ವ್ಯಕ್ತಿಯನ್ನು ಸರಕಾರಿ ಸ್ವಾಮ್ಯದ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ಪ್ರಕರಣಗಳು ಹಾಗೂ ರೋಗ ದೃಢಪಟ್ಟ ರೋಗಿಗಳಿಗೆ ಪ್ರತ್ಯೇಕ ವಾರ್ಡ್ಗಳನ್ನು ಸ್ಥಾಪಿಸಲು ಅರವಿಂದ ಕೇಜ್ರಿವಾಲ್ ಸರಕಾರ ನಗರದ ಮೂರು ಖಾಸಗಿ ಆಸ್ಪತ್ರೆಗಳಿಗೆ ಕೇಳಿಕೊಂಡಿದೆ.





