ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ಪ್ರತಿಯಾಗಿ ಸಮುದ್ರದಲ್ಲಿ ಸಮರಾಭ್ಯಾಸ ನಡೆಸುತ್ತಿರುವ ಚೀನಾ

Photo: Twitter/@ANI
ಬೀಜಿಂಗ್: ಅಮೆರಿಕಾದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ(Nancy Pelosi) ಅವರು ತನ್ನ ಎಚ್ಚರಿಕೆ ಹೊರತಾಗಿಯೂ ತೈವಾನಿ(Taiwan)ಗೆ ಭೇಟಿ ನೀಡಿರುವುದರಿಂದ ಆಕ್ರೋಶಗೊಂಡಿರುವ ಚೀನಾ(China) ಗುರುವಾರ ತೈವಾನ್ ಸುತ್ತಲಿನ ಪ್ರದೇಶದಲ್ಲಿ ತನ್ನ ಅತಿ ದೊಡ್ಡ ಸಮರಾಭ್ಯಾಸಗಳನ್ನು ಆರಂಭಿಸಿದೆ. ಅಂತರಾಷ್ಟ್ರೀಯ ಹಡಗು ಮಾರ್ಗಗಳಲ್ಲಿ ಈ ಸಮರಾಭ್ಯಾಸ ನಡೆಯುತ್ತಿದೆ.
ಕಳೆದ 25 ವರ್ಷಗಳಲ್ಲಿಯೇ ತೈವಾನ್ಗೆ ಭೇಟಿ ನೀಡುತ್ತಿರುವ ಮೊದಲ ಅತ್ಯುನ್ನತ ಅಧಿಕಾರಿ ಪೆಲೊಸಿ ಅವರಾಗಿದ್ದಾರೆ. ಚೀನಾದ ಎಚ್ಚರಿಕೆಗಳ ಹೊರತಾಗಿಯೂ ಅವರು ಭೇಟಿ ನೀಡಿದ್ದರಿಂದ ಚೀನಾ 'ಶಿಕ್ಷೆ' ನೀಡುವುದಾಗಿ ಶಪಥ ಮಾಡಿದ್ದು ಜಗತ್ತಿನ ಅತ್ಯಂತ ವ್ಯಸ್ತ ಜಲಮಾರ್ಗಗಳಲ್ಲಿ ಸಮರಾಭ್ಯಾಸ ನಡೆಸುತ್ತಿದೆ. ಇದಕ್ಕಾಗಿ ತೈವಾನ್ ಸುತ್ತಲಿನ ಆರು ಪ್ರದೇಶಗಳನ್ನು ಆಯ್ದುಕೊಳ್ಳಲಾಗಿದ್ದು ಈ ಅವಧಿಯಲ್ಲಿ ಯಾವುದೇ ಹಡಗುಗಳು ಅಥವಾ ವಿಮಾನ ಈ ಸ್ಥಳದ ಮೂಲಕ ಹಾದು ಹೋಗುವಂತಿಲ್ಲ ಎಂದು ಚೀನಾ ಹೇಳಿದೆಯೆನ್ನಲಾಗಿದೆ.
ಕೆಲವೊಂದು ಕಡೆಗಳಲ್ಲಿ ತೈವಾನ್ ಕಡಲತೀರದಿಂದ ಕೇವಲ 20 ಕಿಮೀ ದೂರದಲ್ಲಿ ಈ ಸಮರಾಭ್ಯಾಸ ನಡೆಯುತ್ತಿದ್ದು ರವಿವಾರ ಅಪರಾಹ್ನ ಅದು ಕೊನೆಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಈ ಸಮರಾಭ್ಯಾಸಗಳು ಅಭೂತಪೂರ್ವವಾಗಿದ್ದು ಈ ಸಂದರ್ಭ ತೈವಾನ್ನ ಆಗಸದಲ್ಲಿ ಮೊದಲ ಬಾರಿ ಕ್ಷಿಪಣಿಗಳು ಹಾರಾಡಲಿವೆ ಎಂದು ಚೀನಾದ ಸರಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಚೀನಾ ಸಮರಾಭ್ಯಾಸ ನಡೆಸುವ ಸ್ಥಳಗಳಿಂದ ದೂರ ಉಳಿಯುವಂತೆ ತೈವಾನ್ನ ಬಂದರು ಪ್ರಾಧಿಕಾರ ಬುಧವಾರ ಹಡಗುಗಳಿಗೆ ಎಚ್ಚರಿಸಿದೆ.
ಈ ಸಮರಾಭ್ಯಾಸವನ್ನು ಚೀನಾ ಸಮರ್ಥಿಸಿಕೊಂಡಿದೆ ಹಾಗೂ ಸಮಸ್ಯೆ ಬಿಗಡಾಯಿಸಲು ಅಮೆರಿಕಾ ಮತ್ತದರ ಮಿತ್ರದೇಶಗಳು ಕಾರಣ ಎಂದು ಹೇಳಿದೆ.
ತೈವಾನ್ನ ಪಡೆಗಳು ಚೀನಾದ ಪಿಎಲ್ಎ ಎದುರು ಬಂದರೆ ಹಾಗೂ ಆಕಸ್ಮತ್ತಾಗಿ ಗುಂಡು ಹಾರಿಸಿದರೆ ಕೂಡ ಪಿಎಲ್ಎ ಪ್ರತಿಕ್ರಮಗಳನ್ನು ಕೈಗೊಳ್ಳಲಿದೆ ಹಾಗೂ ಇದಕ್ಕೆ ತೈವಾನ್ ಜವಾಬ್ದಾರಿಯಾಗಲಿದೆ ಎಂದು ಚೀನಾದ ಮಿಲಿಟರಿ ಮೂಲವೊಂದು ತಿಳಿಸಿದೆ.
ಇದನ್ನೂ ಓದಿ: ತೈವಾನ್ ವಾಯುಪ್ರದೇಶ ಪ್ರವೇಶಿಸಿದ 21 ಚೀನಿ ಯುದ್ಧ ವಿಮಾನ