ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಯು.ಯು. ಲಲಿತ್ ಅವರ ಹೆಸರನ್ನುಶಿಫಾರಸು ಮಾಡಿದ ಸಿಜೆಐ ಎನ್.ವಿ. ರಮಣ

Photo: Twitter/@ANI
ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಗುರುವಾರ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಸಿಜೆಐ ಅವರು "03.08.2022 ದಿನಾಂಕವಿರುವ ತಮ್ಮ ಶಿಫಾರಸು ಪತ್ರದ ಪ್ರತಿಯನ್ನು ಗುರುವಾರ ಬೆಳಗ್ಗೆ ನ್ಯಾಯಮೂರ್ತಿ ಲಲಿತ್ ಅವರಿಗೆ ವೈಯಕ್ತಿಕವಾಗಿ ಹಸ್ತಾಂತರಿಸಿದ್ದಾರೆ'' ಎಂದು ಸುಪ್ರೀಂ ಕೋರ್ಟ್ನ ಅಧಿಕೃತ ಮೂಲಗಳು ತಿಳಿಸಿವೆ.
ಸಿಜೆಐ ರಮಣ ಅವರು ಆಗಸ್ಟ್ 26 ರಂದು ನಿವೃತ್ತಿಯಾದ ನಂತರ ನ್ಯಾಯಮೂರ್ತಿ ಲಲಿತ್ ಅವರು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಲಲಿತ್ ಅವರು ಅಲ್ಪಾವಧಿಯ ಅವಧಿಯನ್ನು ಹೊಂದಿದ್ದು ನವೆಂಬರ್ 8, 2022 ರವರೆಗೆ ಅಧಿಕಾರದಲ್ಲಿ ಇರುತ್ತಾರೆ.
ಪ್ರಸ್ತುತ ಸುಪ್ರೀಂಕೋರ್ಟ್ನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಲಲಿತ್ ಅವರು ಜೂನ್ 1983 ರಲ್ಲಿ ವಕೀಲರಾಗಿ ಸೇರಿಕೊಂಡರು. ಅವರು ಡಿಸೆಂಬರ್ 1985 ರವರೆಗೆ ಬಾಂಬೆ ಹೈಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡಿದರು ನಂತರ ಜನವರಿ 1986 ರಲ್ಲಿ ದಿಲ್ಲಿಯಲ್ಲಿ ಪ್ರಾಕ್ಟೀಸ್ ನ್ನು ಮುಂದುವರಿಸಿದರು.





