ಪರಿಷತ್ ಉಪಚುನಾವಣೆ: ಚಿಂಚನಸೂರ್ ಅವಿರೋಧ ಆಯ್ಕೆ

ಬೆಂಗಳೂರು, ಆ. 4: ‘ಸಿ.ಎಂ.ಇಬ್ರಾಹೀಂ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬೇರೆ ಪಕ್ಷಗಳಿಂದ ಅಭ್ಯರ್ಥಿ ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಬಿಜೆಪಿಯ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಇಂದಿಲ್ಲಿ ಪ್ರಕಟಿಸಿದ್ದಾರೆ.
ವಿಧಾನ ಪರಿಷತ್ತಿನ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಬಾಬುರಾವ್ ಚಿಂಚನಸೂರ್ ಅವರು ನಾಳೆ(ಆ.5) ಮಧ್ಯಾಹ್ನ 12:15ಕ್ಕೆ ವಿಧಾನಸೌಧದ ಮೊದಲ ಮಹಡಿಯಲ್ಲಿನ ಸಭಾಪತಿಯವರ ಕೊಠಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರು, ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ಮಾಡಿದ್ದಾರೆ.
ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾಗಬೇಕಿದ್ದ ಪರಿಷತ್‍ನ ಒಂದು ಸ್ಥಾನಕ್ಕೆ ಆ. 1ಕ್ಕೆ ಉಪಚುನಾವಣೆಯನ್ನು ಘೋಷಣೆ ಮಾಡಲಾಗಿತ್ತು. ಆ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಆ.4ರಂದು ಉಮೇದುವಾರಿಕೆ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿತ್ತು. ಕಣದಲ್ಲಿ ಬೇರೆ ಯಾರು ಅಭ್ಯರ್ಥಿಗಳಿಲ್ಲ ಕಾರಣ ಏಕೈಕ ಅಭ್ಯರ್ಥಿಯಾಗಿದ್ದ ಬಾಬುರಾವ್ ಚಿಂನಸೂರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಗಿದೆ ಎಂದು ವಿಶಾಲಾಕ್ಷಿ ತಿಳಿಸಿದರು.







