ತೈವಾನ್ ಸುತ್ತ ಕ್ಷಿಪಣಿ ಹಾರಿಸಿದ ಚೀನಾ

Photo: PTI
ಬೀಜಿಂಗ್: ತನ್ನ ಎಚ್ಚರಿಕೆಯನ್ನು ಮೀರಿ ಅಮೆರಿಕಾ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ಗೆ ಭೇಟಿ ನೀಡಿರುವುದರಿಂದ ಕೆರಳಿರುವ ಚೀನಾ(China) ಬುಧವಾರದಿಂದ ತೈವಾನ್(Taiwan) ಸುತ್ತ ಸಮುದ್ರದಲ್ಲಿ ಸಮರಾಭ್ಯಾಸದಲ್ಲಿ ತೊಡಗಿಕೊಂಡಿದೆಯಲ್ಲದೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನೂ ಹಾರಿಸಿದೆ ಹಾಗೂ ಸಮರಾಭ್ಯಾಸದ ಭಾಗವಾಗಿ ಯುದ್ಧ ವಿಮಾನಗಳು ಹಾಗೂ ಯುದ್ಧ ನೌಕೆಗಳನ್ನೂ ನಿಯೋಜಿಸಿದೆ. ಚೀನಾ ಇಲ್ಲಿಯವರೆಗೂ ನಡೆಸಿದ ಸಮರಾಭ್ಯಾಸಗಳಲ್ಲಿ ಇದು ಅತಿ ದೊಡ್ಡ ಸಮರಾಭ್ಯಾಸ ಎಂದೇ ತಿಳಿಯಲಾಗಿದೆ.
ಕ್ಷಿಪಣಿಗಳ ನಿಖರತೆಯನ್ನು ಪರೀಕ್ಷಿಸಲು ಹಾಗೂ ಒಂದು ಪ್ರದೇಶಕ್ಕೆ ವೈರಿ ಪ್ರವೇಶ ತಡೆಯಲು ಈ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಚೀನಾದ ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ.
ಚೀನಾದ ಮಿಲಿಟರಿಯು 11 ಡೊಂಗ್ಫೆಂಗ್-ಕ್ಲಾಸ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಲವು ಬ್ಯಾಚುಗಳಲ್ಲಿ ಹಾರಿಸಿದೆ ಹಾಗೂ ಇದು ಪ್ರದೇಶದ ಶಾಂತಿಗೆ ಭಂಗ ತರುತ್ತದೆ ಎಂದು ತೈವಾನ್ ಹೇಳಿದೆ. ಆದರೆ ಈ ಕ್ಷಿಪಣಿಗಳು ಎಲ್ಲಿ ಅಪ್ಪಳಿಸಿವೆ ಎಂದು ತೈವಾನ್ ಹೇಳಿಲ್ಲ.
ತೈವಾನ್ನ ಜನಪ್ರಿಯ ಪ್ರವಾಸಿ ತಾಣದ ಸಮೀಪ ಐದು ಮಿಲಿಟರಿ ಹೆಲಿಕಾಪ್ಟರುಗಳು ತೀರಾ ಕೆಳಗೆ ಹಾರಾಟ ನಡೆಸಿವೆ ಎಂದೂ ತಿಳಿದು ಬಂದಿದೆ.
ರವಿವಾರ ಅಪರಾಹ್ನದ ತನಕ ಈ ಸಮರಾಭ್ಯಾಸ ನಡೆಯಲಿದೆ ಎಂದು ಹೇಳಿರುವ ಚೀನಾ ತನ್ನ ಕ್ರಮ ಅಗತ್ಯ ಎಂದು ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ನ್ಯಾನ್ಸಿ ತೈವಾನ್ ಭೇಟಿಗೆ ಪ್ರತಿಯಾಗಿ ಸಮುದ್ರದಲ್ಲಿ ಸಮರಾಭ್ಯಾಸ ನಡೆಸುತ್ತಿರುವ ಚೀನಾ