75ನೇ ಸ್ವಾತಂತ್ರ್ಯೋತ್ಸವ: ಆ.5ರಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ

ಉಡುಪಿ, ಆ.೪: ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲೆಯಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 75 ಕಿ.ಮೀ. ದೂರ ಈ ಜಾಥಾವು ಸಾಗಲಿದೆ.
ನಾಳೆ ಆ.5ರಂದು ಬೆಳಗ್ಗೆ 9ಗಂಟೆಗೆ ಸರಿಯಾಗಿ ಕಾಪು ಉತ್ತರ ಹಾಗೂ ಕಾಪು ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ಕ್ಷೇತ್ರದ ಮಟ್ಟು ಗ್ರಾಮದಲ್ಲಿ ಜಾಥಾ ಉದ್ಘಾಟನೆಗೊಳ್ಳಲಿದೆ. ಬಳಿಕ ಜಾಥಾವು ಶಿರ್ವ ತನಕ ಸಾಗಲಿದೆ.
ಕಾಂಗ್ರೆಸ್ ಪಾದಯಾತ್ರೆಯನ್ನು ಎಐಸಿಸಿ ಕಾರ್ಯದರ್ಶಿ ಮಯ್ಯರ್ ಜೈಕುಮಾರ್ ಉದ್ಘಾಟಿಸಲಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಜಾಥಾದ ನೇತೃತ್ವ ವಹಿಸಲಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ವಿನಯಕುಮಾರ್ ಸೊರಕೆ ಜಾಥಾಕ್ಕೆ ಚಾಲನೆ ನೀಡಲಿರುವರು.
ಆ.6ರಂದು ಬೆಳಗ್ಗೆ ೯ಗಂಟೆಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಡುಪಿ ಕನ್ನರ್ಪಾಡಿಯಿಂದ ಜಾಥಾ ಹೊರಟು ಇಂದ್ರಾಳಿಯವರೆಗೆ ಸಾಗಲಿದೆ. ಅಪರಾಹ್ನ 2ಗಂಟೆಗೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಾಥಾವು ಹೆಬ್ರಿ ತಾಲೂಕು ಕಚೇರಿ ಬಳಿಯಿಂದ ಹೊರಟು ಮುದ್ರಾಡಿಯವರೆಗೆ ಸಾಗಲಿದೆ.
ಆ.7ರಂದು ರವಿವಾರ ಬೆಳಗ್ಗೆ ೯ಕ್ಕೆ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ನಡೆಯಲಿದೆ. ಆ.೮ರಂದು ೯ಗಂಟೆಗೆ ಕುಂದಾಪುರ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಾಥಾವು ಸಾಲಿಗ್ರಾಮದಿಂದ ತೆಕ್ಕಟ್ಟೆಯವರೆಗೆ ಸಾಗಲಿದೆ. ೯ರಂದು ಮಂಗಳವಾರ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಾಥಾವು ಬಜಗೋಳಿ ಬಸ್‌ನಿಲ್ದಾಣದಿಂದ ಹೊರಟು ಕಾರ್ಕಳ ಗಾಂಧಿ ಮೈದಾನದವರೆಗೆ ಸಾಗಲಿದೆ.
ಆ.10ರಂದು ಬೆಳಗ್ಗೆ ೯ಕ್ಕೆ ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಕಂಬದಕೋಣೆಯಿಂದ ಬೈಂದೂರು ತನಕ ಸಾಗಲಿದೆ. ಅಪರಾಹ್ನ ೩:೦೦ಕ್ಕೆ ವಂಡ್ಸೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಂಡ್ಸೆಯಿಂದ ಪಾದಯಾತ್ರೆ ನಡೆಯಲಿದೆ.
ಈ ಕಾರ್ಯಕ್ರಮದಲಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ. ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಮನವಿ ಮಾಡಿದ್ದಾರೆ.