ಭಾರೀ ಮಳೆಗೆ ಕೊಡಗಿನ ಗಡಿ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತ: ಸಂಪಾಜೆ, ಕಲ್ಲುಗುಂಡಿ ಹೆದ್ದಾರಿ ಜಲಾವೃತ

ಮಡಿಕೇರಿ ಆ.4 : ಭಾರೀ ಮಳೆ ಮತ್ತು ಗುಡ್ಡ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಜಲಸ್ಫೋಟದಿಂದ ಕೊಡಗಿನ ಗಡಿ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಪಾಜೆ ಹಾಗೂ ಕಲ್ಲುಗುಂಡಿ ಭಾಗದಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯ ರಭಸಕ್ಕೆ ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಚೆಂಬು ಗ್ರಾಮ ವ್ಯಾಪ್ತಿಯಲ್ಲಿ ಜಲಸ್ಫೋಟದಿಂದ ಮನೆಗಳಿಗೆ ಹಾನಿಯಾಗಿದ್ದು, ಆತಂಕ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಎಂಟು ಇಂಚಿಗೂ ಅಧಿಕ ಮಳೆ ಸುರಿದಿರುವುದು ಅನಾಹುತಕ್ಕೆ ಕಾರಣವಾಗಿದೆ. ರಾತ್ರಿ ಬೆಟ್ಟ ಪ್ರದೇಶದಲ್ಲಿ ಉಂಟಾದ ಜಲ ಸ್ಫೋಟದಿಂದ ಕೆಸರು ಮಿಶ್ರಿತ ನೀರು ಗ್ರಾಮದ ಬಾಲಕೃಷ್ಣ ಎಂಬುವವರ ಮನೆಗೆ ನುಗ್ಗಿ ಸಾಕಷ್ಟು ಹಾನಿಯಾಗಿದೆ.
ಸುತ್ತಮುತ್ತಲ ತೋಟಗಳಿಗೂ ಮಣ್ಣು ನುಗ್ಗಿದೆ, ಅಲ್ಲದೆ ಕೊಟ್ಟಿಗೆಯೊಂದು ನೆಲಸಮವಾಗಿದೆ. ನೀರಿನ ರಭಸಕ್ಕೆ ಭಯಗೊಂಡ ಕೆಲವು ಕುಟುಂಬಗಳು ರಾತ್ರಿಯೇ ಸುರಕ್ಷಿತ ಸ್ಥಳಕ್ಕೆ ಸ್ಳಳಾಂತರಗೊಂಡಿದ್ದಾರೆ. ಸಂಪಾಜೆಯ ಕಲ್ಲಳ್ಳದ ಗಣಪತಿ ಎಂಬುವವರ ಮನೆಯ ಬಳಿ ಭಾರೀ ಬರೆ ಕುಸಿದಿದೆ.
ಮದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಬಲೆಕಂಡಿ ರಸ್ತೆಯಲ್ಲಿ ಭಾರೀ ಪ್ರಮಾಣದ ಬರೆ ಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕರಿಕೆ ರಸ್ತೆಯ ಕೊಟ್ಟಮಲೆ, ಬಾಚಿಮಲೆ ವ್ಯಾಪ್ತಿಯಲ್ಲಿ ಭಾರೀ ಭೂ ಕುಸಿತದಿಂದ, ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಮಣ್ಣು, ಮರದ ರಾಶಿ ಬಿದ್ದಿದೆ. ಇದನ್ನು ತೆರವುಗೊಳಿಸುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.
ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿಗೆ ಒತ್ತಿಕೊಂಡಂತೆ ಇರುವ ಚೆಂಬು ಗ್ರಾಮದ ಊರುಬೈಲುವಿನಿಂದ ಸಂಪಾಜೆಗೆ ಸಂಪರ್ಕ ಕಲ್ಪಿಸುವ ಸೇತುವೆಯ ಪಾಶ್ರ್ವ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತವಾಗಿ ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಯಸ್ವಿನಿ ನದಿಯ ಪ್ರವಾಹದಿಂದ ಮಡಿಕೇರಿ-ಮಂಗಳೂರು ರಸ್ತೆಯ ಕೊಯನಾಡಿನ ಸೇತುವೆಯ ಒಂದು ಪಾಶ್ರ್ವಕ್ಕೆ ಹಾನಿಯುಂಟಾಗಿದ್ದು, ಇದೀಗ ಅದರ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಬೈಲುಕೊಪ್ಪದಲ್ಲಿ ಪ್ರವಾಹ
ಕುಶಾಲನಗರ ಮತ್ತು ಮೈಸೂರು ಗಡಿಭಾಗದ ಬೈಲುಕೊಪ್ಪದಲ್ಲಿ ನಿರಂತರ ಮಳೆಯಾಗುತ್ತಿದೆ. ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಪ್ರವಾಹದ ನೀರು ನುಗ್ಗಿ ಸಾಕಷ್ಟು ನಷ್ಟವುಂಟಾಗಿದೆ.
ಆರೆಂಜ್ ಅಲರ್ಟ್
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗಿನ ವರೆಗೆ ಆರೆಂಜ್ ಅಲರ್ಟ್ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಫೋಟೋ :: ಕರಿಕೆ, ಕಲ್ಲಳ್ಳ, ಚೆಂಬು








