ತುಳು ಭಾಷೆ ಉಳಿದು, ಬೆಳೆಯುವಲ್ಲಿ ತುಳು ನಾಟಕಗಳ ಪಾತ್ರ ಹಿರಿದು; ‘ತುಳು ಐಸಿರಿ’ಯಲ್ಲಿ ಅರ್ಜುನ್ ಕಾಪಿಕಾಡ್

ಉಡುಪಿ : ಕರಾವಳಿಯಲ್ಲಿ ತುಳು ಭಾಷೆ ಉಳಿದು, ಬೆಳೆಯುವಲ್ಲಿ ತುಳು ನಾಟಕಗಳು ಪ್ರಮುಖ ಪಾತ್ರ ವಹಿಸಿವೆ. ಇತ್ತೀಚೆಗೆ ತುಳು ಸಿನಿಮಾಗಳೂ ಸಾಕಷ್ಟು ಕೊಡುಗೆ ನೀಡಿವೆ ಎಂದು ತುಳು ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ತುಳು ಸಂಘದ ವತಿಯಿಂದ ಕಾಲೇಜಿನ ಮುದ್ದಣ ಮಂಟಪದಲ್ಲಿ ಗುರುವಾರ ನಡೆದ ‘ತುಳು ಐಸಿರಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಎಂಜಿಎಂನಂಥ ಕಾಲೇಜಿನಲ್ಲಿ ತುಳುವಿನಲ್ಲಿ ವಿದ್ಯಾರ್ಥಿಗಳೇ ನಡೆಸುವ ಇಂಥ ಕಾರ್ಯಕ್ರಮವೂ ತುಳು ಭಾಷೆಯ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡುತ್ತವೆ ಎಂದ ಕಾಪಿಕಾಡ್, ಇದು ಕರಾವಳಿಯ ಉಳಿದ ಕಾಲೇಜುಗಳಿಗೂ ಮಾದರಿ ಯಾಗಬೇಕು. ತುಳುವರನ್ನೇ ನಂಬಿರುವ ತುಳು ಸಿನಿಮಾವನ್ನೂ ವಿದ್ಯಾರ್ಥಿಗಳು ಹೆಚ್ಚೆಚ್ಚು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದವರು ಹೇಳಿದರು.
ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳು ಕುಟುಂಬಗಳು ಮಕ್ಕಳಿಗೆ ತುಳು ಸಂಸ್ಕಾರ, ಸಂಸ್ಕೃತಿಗಳನ್ನು ಕಲಿಸಬೇಕಾಗಿದೆ. ದೈವಸ್ಥಾನ, ದೇವಸ್ಥಾನ, ಕೂಡುಕುಟುಂಬದ ಬದುಕಿನ ಬಗ್ಗೆ ಅರಿವು ಮಾಡಿ ಕೊಡಬೇಕು. ತುಳುವಿಗೆ ಜಾತಿ-ಧರ್ಮದ ಬೇಧವಿಲ್ಲ. ಮಕ್ಕಳಲ್ಲಿ ಚಿಕ್ಕಂದಿನಿಂದಲೇ ತುಳುವಿನ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಬೇಕು ಎಂದರು.
ಕಾರ್ಕಳದ ಉದ್ಯಮಿ ಹಾಗೂ ಮುನಿಯಾಲು ಉದಯ ಕೃಷ್ಣಯ್ಶ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ತುಳು ಚಿತ್ರನಟ ಹಾಗೂ ಕಿರುತೆರೆಯ ನಿರ್ದೇಶಕ ವಿಜಯ್ ಶೋಭರಾಜ್ ಪಾವೂರು ಹಾಗೂ ಚಿತ್ರನಟಿ ಗಾನ ಭಟ್ ಉಪಸ್ಥಿತರಿದ್ದರು. ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತು ವಸಂತಕುಮಾರ್ ಅತಿಥಿಗಳನ್ನು ಸ್ವಾಗತಿಸಿದರೆ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಮೈತ್ರಿ ಕೆ. ವಂದಿಸಿದರು.
