ಕೇಂದ್ರ ಸರಕಾರ ಕಬ್ಬಿನ ಎಫ್‍ಆರ್ ಪಿ ದರ ನಿಗದಿ ರೈತರಿಗೆ ಅನ್ಯಾಯ: ಕುರುಬೂರು ಶಾಂತಕುಮಾರ್

ಬೆಂಗಳೂರು, ಆ.4: ಕಬ್ಬಿಗೆ ಬಳಸುವ ರಸಗೊಬ್ಬರದ ಪೊಟ್ಯಾಶ್ 850 ರಿಂದ 1700, ಡಿಎಪಿ 1000ದಿಂದ 1350 ರೂ.ಗೆ ಏರಿಕೆಯಾಗಿದೆ. ಕಬ್ಬು ಕಟಾವು ಕೂಲಿ 350 ರಿಂದ 600 ರೂಪಾಯಿ, ಕಬ್ಬಿನ ಬೀಜದ ಬೆಲೆ 2500 ರಿಂದ 3200 ರೂ., ಹೀಗೆ ಎಲ್ಲ ಬೆಲೆಗಳು ಏರಿಕೆಯಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಗಾರಿದ್ದಾರೆ.
ಆದರೆ, ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರಕಾರ ಎಫ್‍ಆರ್‍ಪಿ ದರವನ್ನು ಕೇವಲ 150 ರೂ.ಏರಿಕೆ ಮಾಡಿ ಟನ್‍ಗೆ 3050 ರೂ.ನಿಗದಿ ಮಾಡಿದೆ, ಇದು ನ್ಯಾಯವೇ? ಎಫ್‍ಆರ್ ಪಿ ದರವನ್ನು ಪುನರ್ ಪರಿಶೀಲನೆ ಮಾಡುವಂತೆ ಕಬ್ಬು ಬೆಳೆಗಾರರಾದ ನಾವು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಆಧರಿತ ಪ್ರಮಾಣ 10ರಿಂದ 10.25ಕ್ಕೆ ಏರಿಕೆ ಮಾಡಿ, ರೈತರಿಗೆ 50 ರೂ.ಹೆಚ್ಚುವರಿ ಹೊರೆ ಬರುವಂತೆ ಮಾಡಲಾಗಿದೆ. ಕೇಂದ್ರ ಸರಕಾರ ಕಬ್ಬು ಬೆಳೆಯುವ ರೈತರಿಗೆ ಮತ್ತೊಂದು ರೀತಿ ದ್ರೋಹ ಬಗೆದಿದೆ ಎಂದು ಕುರುಬೂರು ಶಾಂತಕುಮಾರ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.





