ಪದ್ಮಶಾಲಿ ನೇಕಾರ ಪ್ರತಿಷ್ಠಾನದಿಂದ ಆ.7ಕ್ಕೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆ

ಉಡುಪಿ, ಆ.4: ಪದ್ಮಶಾಲಿ/ಶೆಟ್ಟಿಗಾರ ಸಮಾಜದ ಕುಲಕಸುಬು ಕೈಮಗ್ಗ ನೇಕಾರಿಕೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿ ಉಡುಪಿಯ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಇದೇ ರವಿವಾರ, ಆ.7ರಂದು ಕಲ್ಯಾಣಪುರದ ಶ್ರೀಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದ ಸಭಾಂಗಣದಲ್ಲಿ ಮೊದಲ ಬಾರಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಕೈಮಗ್ಗ ಸೀರೆ ನಮ್ಮ ಹೆಮ್ಮೆ’ ಎಂಬ ಘೋಷಣೆಯೊಂದಿಗೆ ಸಮಾಜದ ಮಹಿಳೆಯರು ಕೈಮಗ್ಗದ ಸೀರೆಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಕೈಮಗ್ಗದ ಸೀರೆಗಳಿಗೆ ಹೊಸ ಆಯಾಮ ನೀಡುವ, ಬಹು ಬೇಡಿಕೆಯ ಸೀರೆಗಳಾಗಿ ಪರಿವರ್ತಿಸುವ, 100 ಮಂದಿ ಕೈಮಗ್ಗದ ನೇಕಾರರು ಮತ್ತೆ ನೇಕಾರ ವೃತ್ತಿಗೆ ಮರಳುವಂತೆ ಮಾಡುವ ಯೋಜನೆ ಪ್ರತಿಷ್ಠಾನಕ್ಕಿದೆ ಎಂದರು.
ಆ.7ರಂದು ಬೆಳಗ್ಗೆ 9ಗಂಟೆಯಿಂದ ಸಂಜೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಮೊದಲು ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ಅವರ ಮತ್ತು ವಿದ್ಯಾರ್ಥಿಗಳ ಪೋಷಕರ ಜೊತೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ಶಿಕ್ಷಣ ತಜ್ಞರಾದ ನಾಗರಾಜ ಕಟೀಲ್, ದಿನೇಶ್ ಶೆಟ್ಟಿಗಾರ್ ಹಾಗೂ ಸದಾಶಿವ ಗೋಳಿಜೋರಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ರತ್ನಾಕರ್ ಇಂದ್ರಾಳಿ ತಿಳಿಸಿದರು.
ಬೆಳಗ್ಗೆ 11ಕ್ಕೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಕಲ್ಯಾಣಪುರ ಶ್ರೀ ಆದಿಶಕ್ತಿ ಬ್ರಹ್ಮಲಿಂಗ ವೀರಭದ್ರ ದೇವಸ್ಥಾನದ ಪ್ರಧಾನ ಮೊಕ್ತೇಸರ ಜ್ಯೋತಿಪ್ರಸಾದ್ ಶೆಟ್ಟಿಗಾರ್ ಹಾಗೂ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ಜ್ಯೋತಿಪ್ರಸಾದ್ ಶೆಟ್ಟಿಗಾರ್ ಉದ್ಘಾಟಿಸಲಿದ್ದಾರೆ. ಜಿಪಂ ಸಿಇಓ ಪ್ರಸನ್ನ ಎಚ್., ಉಡುಪಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾದ್ಯಕ್ಷೆ ಲಕ್ಷ್ಮೀ ಮಂಜು ಕೊಳ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಹಿರಿಯ ನೇಕಾರರಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ಜಿಲ್ಲೆಯಲ್ಲಿ 100 ಕೈಮಗ್ಗ ನೇಕಾರರನ್ನು ನೇಕಾರ ವೃತ್ತಿಗೆ ಕರೆತರುವ ಸಂಕಲ್ಪವಾಗಿ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದರು.
ಮಗ್ಗದ ಸೀರೆಯಲ್ಲಿ ಸೌಂದರ್ಯ ಸ್ಪರ್ಧೆ: ಅಪರಾಹ್ನ ೧೨:೩೦ಕ್ಕೆ ನೇಕಾರ ಪದ್ಮಶಾಲಿ ಬಂಧುಗಳಿಗೆ ಕೈಮಗ್ಗ ಉಡುಗೆ ತೊಡುಗೆಯಲ್ಲಿ ಸೌಂದರ್ಯ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದೆ. ಇದರಲ್ಲಿ ನೇಕಾರ ಸಿರಿ (ವೈಯಕ್ತಿಕ), ನೇಕಾರ ಸಿರಿ ವರ (ದಂಪತಿ) ಹಾಗೂ ನೇಕಾರ ಕುಟುಂಬ ಸಿರಿ (ತಂಡ ಸ್ಪರ್ಧೆ) ವಿಭಾಗಗಳಿರುತ್ತವೆ. ಅವಿಭಜಿತ ದ.ಕ.ಜಿಲ್ಲೆಯ 16 ವೀರಭದ್ರ ದೇವಸ್ಥಾನ ಹಾಗೂ ವಲಯ ವೇದಿಕೆಗಳ ಸದಸ್ಯರು ಇದರಲ್ಲಿ ಭಾಗವಹಿಸಬಹುದು ಎಂದೂ ರತ್ನಾಕರ ಇಂದ್ರಾಳಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಶೆಟ್ಟಿಗಾರ್ ಹೆರ್ಗ, ಉಪಾಧ್ಯಕ್ಷ ಸದಾಶಿವ ಗೋಳಿಜೋರ, ದತ್ತರಾಜ್ ಶೆಟ್ಟಿಗಾರ್, ಸರೋಜಾ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಪದ್ಮಶಾಲಿ ನೇಕಾರ ಪ್ರತಿಷ್ಠಾನ ಹೊರತರುತ್ತಿರುವ ವಿಶಿಷ್ಟ ಇ-ವಾರ್ತಾ ಪತ್ರಿಕೆ ‘ನೇಕಾರಬಿಂಬ’ದ ಮೊದಲ ಸಂಚಿಕೆಯು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಸವಿತಾ ಉಮಾಕಾಂತ್‌ಶೆಟ್ಟಿಗಾರ್ ಇವರ ವಾಟ್ಸ್‌ಆಪ್ ಸಂಖ್ಯೆ 7353873507ಕ್ಕೆ ಕಳುಹಿಸಬಹುದು.







