ಕಸ್ತೂರಿರಂಗನ್ ವರದಿ ತಿರುಚಿ ಅಪಪ್ರಚಾರ: ಪರಿಸರವಾದಿಗಳ ಆರೋಪ
ವರದಿಯ ಕನ್ನಡ ರೂಪಾಂತರ ಒದಗಿಸಿ ಜನಜಾಗೃತಿಗೆ ಒತ್ತಾಯ

ಚಿಕ್ಕಮಗಳೂರು, ಆ.4: ಬಹು ಚರ್ಚಿತ ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳ ಬಗ್ಗೆ ರಾಜ್ಯ ಸರಕಾರವು ವರದಿ ಅನ್ವಯವಾಗುವ ಪ್ರದೇಶಗಳ ಜನರಲ್ಲಿ ಅರಿವು ಮೂಡಿಸಲು ಮುಂದಾಗಬೇಕು. ಈ ವರದಿ ಜಾರಿಯಿಂದಾಗಿ ಮಲೆನಾಡು ಭಾಗದ ಜನರಿಗೆ ಭಾರೀ ತೊಂದರೆಯಾಗಲಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ವರದಿಯನ್ನು ತಿರುಚಿ ಜನರಲ್ಲಿ ಆತಂಕ ಮೂಡಿಸಲಾಗುತ್ತಿದೆ ಎಂದು ಜಿಲ್ಲೆಯ ಪರಿಸರವಾದಿಗಳು ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ನ ಡಿ.ವಿ.ಗಿರೀಶ್, ವೈಲ್ಡ್ ಕ್ಯಾಟ್ ಸಿ ಸಂಸ್ಥೆಯ ಶ್ರೀದೇವ್ ಹುಲಿಕೆರೆ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ್, ಕಸ್ತೂರಿ ರಂಗನ್ ವರದಿಯಲ್ಲಿರುವ ವಿಚಾರಗಳಿಗಿಂತ ಇಲ್ಲದಿರುವ ವಿಷಯಗಳನ್ನು ಅದರೊಳಗಿದೆ ಎಂಬಂತೆ ಕೆಲ ಕಾಫಿ ಬೆಳೆಗಾರರು ಹಾಗೂ ಹೋರಾಟಗಾರರು ಅಪಪ್ರಚಾರ ಮಾಡುತ್ತಿದ್ದಾರೆ. ವರದಿಯನ್ನು ತಿರುಚಿ ಜನರಲ್ಲಿ ಆತಂಕ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ವರದಿ ವಿರೋಧಿಸುತ್ತಿರುವವರು ವರದಿಯನ್ನು ಪೂರ್ಣವಾಗಿ ಅಧ್ಯಯನ ಮಾಡದೇ ತಮ್ಮದೇ ಆದ ತೀರ್ಪನ್ನು ಹೊರ ಹಾಕುತ್ತಿರುವುದು ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿಗೆ ಮುನ್ನ 2011ರಲ್ಲಿ ಪರಿಸರ ತಜ್ಞ ಪ್ರೊ.ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ 1,29,037 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಶಿಫಾರಸು ಮಾಡಿತ್ತು. ಆದರೆ ಆ ವರದಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ ಜನವಸತಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ತೀರಾ ನಿಯಂತ್ರಣ ಹೇರುವ ಹಿನ್ನೆಲೆಯಲ್ಲಿ ಘಟ್ಟದ ವ್ಯಾಪ್ತಿಯ ರಾಜ್ಯಗಳ ತೀವ್ರ ವಿರೋಧಕ್ಕೆ ಒಳಗಾಯಿತು. ಅನಂತರ ಕೇಂದ್ರ ಸರಕಾರ ಕಸ್ತೂರಿ ರಂಗನ್ ಸಮಿತಿಯನ್ನು ನೇಮಿಸಿತು. ಈ ಸಮಿತಿ 2013ರಲ್ಲಿ ವರದಿಯನ್ನು ನೀಡಿ ಕೇವಲ 59,940 ಚ.ಕಿ.ಮೀ. ಪ್ರದೇಶವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಅಂದರೆ ಪಶ್ಚಿಮಘಟ್ಟದ ಶೇ.37ರಷ್ಟು ಅರಣ್ಯ ಪ್ರದೇಶ ಮಾತ್ರ ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಿತು. ಇದರಲ್ಲಿ ಕರ್ನಾಟಕ ರಾಜ್ಯದಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವುದು 20,668 ಚ.ಕಿ.ಮೀ. ವ್ಯಾಪ್ತಿ ಮಾತ್ರ. ಸಮಿತಿ ಗುರುತಿಸಿರುವ ಪ್ರದೇಶದೊಳಗೆ ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನವನಗಳ ಜೊತೆಗೆ ರಕ್ಷಿತಾರಣ್ಯಗಳು ಸೇರಿವೆ. ಗಾಡ್ಗೀಳ್ ವರದಿಗಿಂತ ಮೃದುವಾಗಿರುವ ವಿಭಿನ್ನ ವರದಿಯನ್ನು ಕಸ್ತೂರಿ ರಂಗನ್ ಸಮಿತಿ ನೀಡಿದೆ. ಅದರಲ್ಲಿ ಈ ಪ್ರದೇಶವನ್ನು ಸಾಂಸ್ಕೃತಿಕ ಭೂ ದೃಶ್ಯಾವಳಿ ಹಾಗೂ ಶೇ.41ರಷ್ಟು ಪ್ರದೇಶವನ್ನು ನೈಸರ್ಗಿಕ ಭೂ ದೃಶ್ಯಾವಳಿ ಪ್ರದೇಶವೆಂದು ಗುರುತಿಸಲಾಗಿದೆ. ಅದರಲ್ಲೂ ಸಹ ಶೇ.37ರಷ್ಟು ಪ್ರದೇಶವನ್ನು ಜೈವಿಕ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಾಂಸ್ಕೃತಿಕ ಭೂ ದೃಶ್ಯಾವಳಿ ಪ್ರದೇಶದಡಿಯಲ್ಲಿ ಬರುವ ಪ್ರದೇಶಗಳಲ್ಲಿ ಜನವಸತಿ ಮತ್ತು ಕೃಷಿ ಚಟುವಟಿಕೆ ಎಂದಿನಂತೆಯೇ ಮುಂದುವರಿಯುತ್ತದೆ. ಅಲ್ಲಿ ಶಾಸನಬದ್ಧ ಹಾಗೂ ಕಾನೂನು ನಿಯಂತ್ರಣಗಳು ಮುಂದುವರಿಯುತ್ತವೆಯೇ ಹೊರತು ಕಾರ್ಯಪಡೆ ಯಾವುದೇ ಹೊಸ ನಿಯಂತ್ರಣಗಳನ್ನು ಹೇರಿಲ್ಲ. ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡುವ ಕೈಗಾರಿಕೆಗಳನ್ನು ಪರಿಸರಕ್ಕೆ ಧಕ್ಕೆ ತಾರದಂತೆ ಕೈಗೊಳ್ಳಲು ಸೂಚಿಸಿದೆ. ನೈಸರ್ಗಿಕ ಭೂ ದೃಶ್ಯಾವಳಿ ಪ್ರದೇಶದಲ್ಲಿ ಮಾತ್ರ `ಕೆಂಪು' ವರ್ಗಕ್ಕೆ ಸೇರುವ ಕೈಗಾರಿಕೆಗಳನ್ನು ಸ್ಥಾಪಿಸುವ ಹಾಗಿಲ್ಲ. `ಕಿತ್ತಳೆ'/ `ಬಿಳಿ' ವರ್ಗದ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದ್ದರೂ ಪರಿಸರಕ್ಕೆ ಮಾರಕವಾಗಿರಬಾರದು.
ಸಾಂಸ್ಕೃತಿಕ ಭೂ ದೃಶ್ಯಾವಳಿ ಪ್ರದೇಶದಲ್ಲಿ ಕೃಷಿ ಸೇರಿದಂತೆ ಜನರ ದೈನಂದಿನ ಚಟುವಟಿಕೆಗೆ ಯಾವುದೇ ನಿರ್ಬಂಧವನ್ನು ಈ ವರದಿಯಲ್ಲಿ ಹೇಳಿಲ್ಲ. ಆದರೆ ವರದಿಯಲ್ಲಿ ಉಲ್ಲೇಖಿಸದಿರುವ ಅನೇಕ ಸಂಗತಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಸೂಕ್ಷ್ಮ ಪ್ರದೇಶದಲ್ಲಿರುವ ಭೂ ಹಿಡುವಳಿದಾರರನ್ನು ಒಕ್ಕಲೆಬ್ಬಿಸಲಾಗುತ್ತದೆ, ಮುಂದಿನ ದಿನಗಳಲ್ಲಿ ಎಲ್ಲ ತೋಟಗಳನ್ನು ಅರಣ್ಯ ಎಂದು ಘೋಷಿಸಲಾಗುತ್ತದೆ, ಕೀಟನಾಶಕ ಹಾಗೂ ಗೊಬ್ಬರ ಬಳಕೆಯನ್ನು ನಿಯಂತ್ರಿಸಲಾಗುತ್ತದೆ, ಜನರನ್ನು ಓಡಿಸಲು ಕಾಡುಪ್ರಾಣಿಗಳನ್ನು ತಂದು ಬಿಡಲಾಗುವುದು, ಮನೆ ಕಟ್ಟಲು ಅಥವಾ ನವೀಕರಿಸಲು ಬಿಡುವುದಿಲ್ಲ, ಸೀಮೆಎಣ್ಣೆ ಅಥವಾ ಬುಡ್ಡಿದೀಪ ಇಟ್ಟುಕೊಳ್ಳುವ ಹಾಗಿಲ್ಲ, ಆಸ್ತಿಯ ಮಾಲಕತ್ವ ಬದಲಾವಣೆ ಹಾಗೂ ಉತ್ತರಾಧಿಕಾರತ್ವವನ್ನು ನಿಷೇಧಿಸಲಾಗುವುದು, ಗಿರಿಜನರನ್ನು ಎತ್ತಂಗಡಿ ಮಾಡಲಾಗುತ್ತದೆ ಎಂಬಿತ್ಯಾದಿಯಾಗಿ ವರದಿಯಲ್ಲಿಲ್ಲದ ಸಂಗತಿಗಳನ್ನು ಹೇಳುತ್ತಾ ಜನರು ಭಯ ಬೀಳುವಂತೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ವರದಿಯಲ್ಲಿರುವ ನೈಜ ಅಂಶಗಳನ್ನು ಜನರಿಗೆ ತಿಳಿಸಲು ಪ್ರತೀ ಪಂಚಾಯತ್‍ಗೆ ವರದಿಯ ಕನ್ನಡ ರೂಪಾಂತರವನ್ನು ಒದಗಿಸಬೇಕೆಂದು ಒತ್ತಾಯಿಸಿರುವ ಮುಖಂಡರು, ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನು ಈ ವರದಿಯ ನೈಜ ಶಿಫಾರಸ್ಸಗಳನ್ನು ಜನರಿಗೆ ತಿಳಿಸಲು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.







