ಶಾಲೆಯಲ್ಲಿ ಶಿರವಸ್ತ್ರ ನಿಷೇಧ :ಫ್ರಾನ್ಸ್‌ಗೆ ವಿಶ್ವಸಂಸ್ಥೆ ಸಮಿತಿ ಖಂಡನೆ

ಜಿನೆವಾ, ಆ.4: ವಿದ್ಯಾಥಿನಿಯೊಬ್ಬರು ಶಾಲೆಯಲ್ಲಿ ಓದುತ್ತಿದ್ದಾಗ ಶಿರವಸ್ತ್ರ(ಹೆಡ್‌ಸ್ಕಾರ್ಫ್) ಧರಿಸುವುದನ್ನು ನಿಷೇಧಿಸುವ ಮೂಲಕ ಫ್ರಾನ್ಸ್ ಅಂತರಾಷ್ಟ್ರೀಯ ಹಕ್ಕುಗಳ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆಯ ಸಮಿತಿಯೊಂದು ತೀರ್ಪು ನೀಡಿದೆ.
2010ರಲ್ಲಿ ವೃತ್ತಿಪರ ತರಬೇತಿ ಕೋರ್ಸ್‌ಗೆ ಸೇರಬಯಸಿದ್ದ ಮಹಿಳೆ ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದಲ್ಲಿ ತೇರ್ಗಡೆಯಾಗಿದ್ದರು. ಆದರೆ ಆಕೆ ಶಿರವಸ್ತ್ರ ಧರಿಸಿದ್ದ ಕಾರಣ ಆಕೆಗೆ ಪ್ಯಾರಿಸ್‌ನ ಆಗ್ನೇಯ ಉಪನಗರದ ಲಾಂಗೆವಿನ್ ವಾಲನ್ ಹೈಸ್ಕೂಲ್‌ನ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿದ್ದರು. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತದ ಬಟ್ಟೆ ಧರಿಸುವುದಕ್ಕೆ ಇದ್ದ ನಿಷೇಧವನ್ನು ಅವರು ಈ ಸಂದರ್ಭ ಉಲ್ಲೇಖಿಸಿದ್ದರು. ಇದನ್ನು ಪ್ರಶ್ನಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ಅರ್ಜಿ ಸಲ್ಲಿಸಲಾಗಿತ್ತು. ಶಾಲೆಯ ಈ ಕ್ರಮ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಸಮಿತಿ ತೀರ್ಪು ನೀಡಿದೆ. ತಲೆಗೆ ಸ್ಕಾರ್ಫ್ ಧರಿಸಿ ಶಿಕ್ಷಣ ಮುಂದುವರಿಸುವುದನ್ನು ನಿರ್ಬಂಧಿಸುವ ಮೂಲಕ ಆಕೆಯ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಮಾರ್ಚ್‌ನಲ್ಲಿ ಹೊರಬಿದ್ದಿರುವ ತೀರ್ಪಿನ ಪ್ರತಿ ತನಗೆ ಬುಧವಾರ ಲಭಿಸಿದೆ ಎಂದು ಮಹಿಳೆಯ ಲಾಯರ್ ಸೆಫೆನ್ ಗುಯೆರ್ ಹೇಳಿರುವುದಾಗಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.