ಜನನ ಮರಣಗಳ ನೋಂದಣಿ ನಿಯಮಾವಳಿ ತಿದ್ದುಪಡಿ ರದ್ಧತಿಗೆ ಆಗ್ರಹಿಸಿ ಸಿಎಂಗೆ ಮನವಿ

ಉಡುಪಿ, ಆ.5: ಕರ್ನಾಟಕ ಜನನ ಮತ್ತು ಮರಣಗಳ ನೋಂದಣಿ ನಿಯಮಾವಳಿಗಳಿಗೆ ತರಲಾದ ತಿದ್ದುಪಡಿ ಯನ್ನು ಕೂಡಲೇ ರದ್ದು ಪಡಿಸುವಂತೆ ಆಗ್ರಹಿಸಿ ಉಡುಪಿ ವಕೀಲರ ಸಂಘದ ವತಿಯಿಂದ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಜೆ.ಎಂ.ಎಫ್.ಸಿ. ನ್ಯಾಯಾಲಯಗಳಿಗೆ ಇದ್ದ ಒಂದು ವರ್ಷಕ್ಕೆ ಮೇಲ್ಪಟ್ಟ ಜನನ-ಮರಣಗಳ ವಿಳಂಬಿತ ನೊಂದಾವಣೆಯ ಅಧಿಕಾರವನ್ನು ರದ್ಧುಪಡಿಸಿ, ವಿಭಾಗಾಧಿಕಾರಿಗಳು/ಸಹಾಯಕ ಕಮಿಷನರ್‌ಗಳಿಗೆ ನೀಡಿ ಇತ್ತೀಚೆಗೆ ಸರಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಕಕ್ಷಿಗಾರರು ಮತ್ತು ವಕೀಲರಿಗೆ, ಅದರಲ್ಲಿಯೂ ಮುಖ್ಯವಾಗಿ ಕಿರಿಯ ವಕೀಲರಿಗೆ ತೀವ್ರ ತೊಂದರೆ ಉಂಟಾಗಿದೆ.
ಅಲ್ಲದೆ ಈಗಾಗಲೇ ಸಹಾಯಕ ಕಮಿಷನರ್ ನ್ಯಾಯಾಲಯವು ಕಂದಾಯ ಪ್ರಕರಣಗಳ ಹೊರೆಯ ಒತ್ತಡದಲ್ಲಿ ರುವುದಲ್ಲದೆ, ರಾಜಕೀಯ ಹಸ್ತಕ್ಷೇಪಕ್ಕೂ ಹೆಚ್ಚಿನ ಅವಕಾಶ ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಈ ಅಧಿ ಸೂಚನೆಯನ್ನು ರದ್ದುಪಡಿಸಿ, ಈ ಹಿಂದೆ ಜೆಎಂಎಫ್‌ಸಿ ನ್ಯಾಯಾಲಯಗಳಿಗಿದ್ದ ಅಧಿಕಾರ ವ್ಯಾಪ್ತಿಯನ್ನು ಮುಂದುವರಿಸಿ ಮತ್ತೆ ಆದೇಶ ಹೊರಡಿಸಬೇಕು ಎಂದು ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ.
ಮನವಿಯನ್ನು ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಪ್ರಧಾನ ಕಾರ್ಯ ದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್, ಜಂಟಿ ಕಾರ್ಯದರ್ಶಿ ಎನ್. ನಾಗರಾಜ್, ಕ್ರೀಡಾ ಕಾರ್ಯದರ್ಶಿ ರವೀಂದ್ರ ಬೈಲೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಪೂರ್ಣಿಮ, ಅಮೃತಕಲಾ, ದೇವದಾಸ್ ಶೆಟ್ಟಿಗಾರ್, ಆಶೀದುಲ್ಲಾ, ಶಿವಾನಂದ ಅಮೀನ್, ಆಕಾಶ್, ವಕೀಲರಾದ ಪ್ರಶಾಂತ್ ಕುಲಾಲ್, ಪ್ರಜ್ವಲ್ ಶೆಟ್ಟಿ, ಅಲೆಕ್ಸ್ ಉಪಸ್ಥಿತರಿದ್ದರು.







