ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಮುಂದೆ ಕೆಟ್ಟ ದಿನಗಳು ಕಾದಿವೆ: ಪಾಕಿಸ್ತಾನ ವಿತ್ತ ಸಚಿವರ ಎಚ್ಚರಿಕೆ

Photo via Twitter
ಇಸ್ಲಮಾಬಾದ್, ಆ.5: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಮುಂದೆ ಇನ್ನಷ್ಟು ಕೆಟ್ಟ ದಿನಗಳು ಕಾದಿವೆ. ಮುಂದಿನ 3 ತಿಂಗಳ ಕಾಲ ಸರಕಾರ ಆಮದಿನ ಮೇಲೆ ನಿರ್ಬಂಧ ಮುಂದುವರಿಸಲಿದೆ ಎಂದು ಪಾಕಿಸ್ತಾನದ ವಿತ್ತ ಸಚಿವ ಮಿಫ್ತಾ ಇಸ್ಮಾಯಿಲ್ ಶುಕ್ರವಾರ ಹೇಳಿದ್ದಾರೆ.
ಕರಾಚಿಯಲ್ಲಿ ಸ್ಟಾಕ್ ಎಕ್ಸ್ಚೇಂಜ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪದಚ್ಯುತ ಪ್ರಧಾನಿ ಇಮ್ರಾನ್ ನೇತೃತ್ವದ ಈ ಹಿಂದಿನ ಸರಕಾರದ ತಪ್ಪು ಆರ್ಥಿಕ ನೀತಿಯ ಕಾರಣದಿಂದ ಈಗಿನ ಪ್ರಧಾನಿ ಶಹಬಾಝ್ ಶರೀಫ್ ನೇತೃತ್ವದ ಸರಕಾರಕ್ಕೆ ತೊಂದರೆಯಾಗಿದೆ. ಇಮ್ರಾನ್ ಸರಕಾರಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾರ್ (ಪಿಎಂಎಲ್-ಎನ್) ನೇತೃತ್ವದ ಸರಕಾರದ ಸಂದರ್ಭ ಸರಕಾರದ ಬಜೆಟ್ ಕೊರತೆ 1,600 ಬಿಲಿಯನ್ ಡಾಲರ್ನಷ್ಟಿತ್ತು.
ಬಳಿಕ ಅಧಿಕಾರಕ್ಕೆ ಬಂದ ಇಮ್ರಾನ್ ನೇತೃತ್ವದ ಪಿಟಿಐ ಪಕ್ಷದ ಸರಕಾರದ ಅವಧಿಯಲ್ಲಿ ಬಜೆಟ್ ಕೊರತೆ 3,500 ಡಾಲರ್ಗೆ ಹೆಚ್ಚಿದೆ. ಈ ರೀತಿಯ ಕೊರತೆಯನ್ನು ಎದುರಿಸಿ ಯಾವುದೇ ದೇಶ ಅಭಿವೃದ್ಧಿ ಹೊಂದಲು ಅಥವಾ ಸ್ಥಿರತೆ ಸಾಧಿಸಲು ಸಾಧ್ಯವಿಲ್ಲ ಎಂದು ಇಸ್ಮಾಯಿಲ್ ಹೇಳಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ. ಬಜೆಟ್ ಕೊರತೆಯನ್ನು ಹೆಚ್ಚಿಸಿದ ಜತೆಗೆ, ಸಾಲವನ್ನು 80%ದಷ್ಟು ಹೆಚ್ಚಿಸುವುದು ದೇಶದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮುಂದಿನ 3 ತಿಂಗಳು ಆಮದನ್ನು ಹೆಚ್ಚಿಸಲು ನಾನು ಬಿಡುವುದಿಲ್ಲ. ಇದೇ ಸಂದರ್ಭ ನಾವು ಸೂಕ್ತವಾದ ನೀತಿಯನ್ನು ರೂಪಿಸಲಿದ್ದೇವೆ. ಪ್ರಗತಿಯ ವೇಗ ತುಸು ಕುಂಠಿತವಾಗಬಹುದು, ಆದರೆ ನನಗೆ ಬೇರೆ ಆಯ್ಕೆಯೇ ಇಲ್ಲ.
ದೇಶವು ಡಿಫಾಲ್ಟರ್ ಪಟ್ಟಿಗೆ ಸೇರ್ಪಡೆಯಾಗದಂತೆ ನೋಡಿಕೊಳ್ಳುವುದು ಸರಕಾರದ ಎದುರಿಗಿರುವ ಪ್ರಧಾನ ಸವಾಲಾಗಿದೆ. ಇದಕ್ಕೆ ತಕ್ಷಣ ಅಲ್ಪಾವಧಿಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ನಾವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೆ. ಆದರೆ ಖಂಡಿತವಾಗಿಯೂ ಮುಂದೆ ಕೆಟ್ಟ ದಿನಗಳು ಕಾದಿವೆ. ಮುಂದಿನ 3 ತಿಂಗಳು ಆಮದನ್ನು ನಿಯಂತ್ರಿಸಿದರೆ, ವಿವಿಧ ಮಾರ್ಗಗಳ ಮೂಲಕ ನಮ್ಮ ರಫ್ತನ್ನು ಉತ್ತೇಜಿಸಬಹುದು ಎಂದವರು ಹೇಳಿದ್ದಾರೆ.
ಪಾಕಿಸ್ತಾನದ ಕರೆನ್ಸಿ ರೂಪಾಯಿ ತೀವ್ರಗತಿಯಲ್ಲಿ ಅಪಮೌಲ್ಯಗೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಅವರು, ಡಾಲರ್ ಹೊರಹರಿವು ಒಳಬರುವ ಪ್ರಮಾಣವನ್ನು ಮೀರಿಸಿರುವುದು ಇದಕ್ಕೆ ಕಾರಣ. ಆದ್ದರಿಂದಲೇ ಆಮದನ್ನು ನಿಲ್ಲಿಸಿದರೆ ಡಾಲರ್ ಹೊರಹರಿವನ್ನು ನಿಯಂತ್ರಿಸಬಹುದು ಎಂದು ಇಸ್ಮಾಯಿಲ್ ಹೇಳಿರುವುದಾಗಿ ವರದಿಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಪಾಕಿಸ್ತಾನದ ಆಮದು ಮೊತ್ತ 80 ಬಿಲಿಯನ್ ಡಾಲರ್ ಆಗಿದ್ದರೆ, ರಫ್ತು ಮೊತ್ತ 31 ಬಿಲಿಯನ್ ಡಾಲರ್ನಷ್ಟಿತ್ತು. ಅಮೆರಿಕ ಮೂಲದ ರೇಟಿಂಗ್ ಏಜೆನ್ಸಿ ಎಸ್ ಆ್ಯಂಡ್ ಪಿ ಸಂಸ್ಥೆ ಕಳೆದ ವಾರ ಪಾಕಿಸ್ತಾನದ ದೀರ್ಘಾವಧಿಯ ರೇಟಿಂಗ್ ಅನ್ನು ‘ಸ್ಥಿರ’ ವಿಭಾಗದಿಂದ ‘ಋಣಾತ್ಮಕ’ ವಿಭಾಗಕ್ಕೆ ಇಳಿಸಿದೆ.