ಇಂದು 14ನೇ ಉಪರಾಷ್ಟ್ರಪತಿಗಾಗಿ ಚುನಾವಣೆ

ಜಗದೀಪ್ ಧನಕರ್ - ಮಾರ್ಗರೆಟ್ ಆಳ್ವ
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಅವರು ಭಾರತದ 14ನೇ ಉಪರಾಷ್ಟ್ರಪತಿಯಾಗಲು ವೇದಿಕೆ ಸಜ್ಜಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಎನ್ಡಿಕೆ ಅಗತ್ಯ ಸಂಖ್ಯೆಯನ್ನು ಹೊಂದಿರುವುದರಿಂದ ಶನಿವಾರ ನಡೆಯುವ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯಾಗಿರುವ ಜಗದೀಪ್ ಧನಕರ್, ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೆಟ್ ಆಳ್ವ ವಿರುದ್ಧ ಗೆಲುವು ಸಾಧಿಸುವುದು ಬಹುತೇಕ ನಿಶ್ಚಿತ ಎಂದು hindustantimes.com ವರದಿ ಮಾಡಿದೆ.
ಇಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಶನಿವಾರ ಸಂಜೆ ಚುನಾವಣಾಧಿಕಾರಿ ಫಲಿತಾಂಶ ಘೋಷಿಸುವ ನಿರೀಕ್ಷೆ ಇದೆ. ಎಲ್ಲ ಪಕ್ಷಗಳೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿ, ಜಗದೀಪ್ ಧನಕರ್ ಅಥವಾ ಮಾರ್ಗರೆಟ್ ಆಳ್ವ ಅವರಿಗೆ ಬೆಂಬಲ ಘೋಷಿಸಿರುವುದರಿಂದ ಚುನಾವಣೆಯಲ್ಲಿ ಹೆಚ್ಚಿನ ಕುತೂಹಲ ಉಳಿದಿಲ್ಲ. ಕಾಂಗ್ರೆಸ್ ಬಳಿಕ ಅತಿದೊಡ್ಡ ವಿರೋಧ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್, ಮತದಾನದಿಂದ ದೂರ ಉಳಿಯುವ ನಿಲುವಿಗೆ ಅಂಟಿಕೊಂಡಿದ್ದು, ಇದು ಆಳ್ವ ಸೋಲಿನ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಉಪರಾಷ್ಟ್ರಪತಿ ಚುನಾವಣೆಗೆ 780 ಮಂದಿ ಮತ ಚಲಾಯಿಸಲಿದ್ದು, ಇವರಲ್ಲಿ 543 ಮಂದಿ ಲೋಕಸಭಾ ಸದಸ್ಯರು ಹಾಗೂ 237 ಮಂದಿ ರಾಜ್ಯಸಭಾ ಸದಸ್ಯರು. ರಾಷ್ಟ್ರಪತಿ ಚುನಾವಣೆಯಲ್ಲಿ ಇದ್ದಂತೆ, ರಾಜ್ಯ ವಿಧಾನಸಭೆಗಳ ಸದಸ್ಯರಿಗೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.
ಎನ್ಡಿಎಯ ಪ್ರಮುಖ ಪಕ್ಷವಾಗಿರುವ ಬಿಜೆಪಿ ಲೋಕಸಭೆಯಲ್ಲಿ 303 ಹಾಗೂ ರಾಜ್ಯಸಭೆಯಲ್ಲಿ 91 ಹೀಗೆ 394 ಸದಸ್ಯಬಲ ಹೊಂದಿದ್ದು, ಬಹುಮತಕ್ಕೆ ಅಗತ್ಯವಾದ 391ಕ್ಕಿಂತ ಅಧಿಕ ಮತಗಳನ್ನು ಹೊಂದಿದೆ. ಒಟ್ಟಾರೆ ಜಗದೀಪ್ ಧನಕರ್ 525 ಮತಗಳನ್ನು ಪಡೆಯುವ ನಿರೀಕ್ಷೆ ಇದೆ. ಶಿವಸೇನೆಯ ಏಕನಾಥ್ ಶಿಂಧೆ ಬಣದ 12 ಸಂಸದರೂ ಸೇರಿದಂತೆ ಎನ್ಡಿಎಯ 462 ಮತಗಳು ಇದರಲ್ಲಿ ಸೇರಿವೆ. ಇದರ ಜತೆಗೆ ಆಂಧ್ರದ ಆಡಳಿತಾರೂಢ ವೈಎಸ್ಆರ್ಸಿಪಿಯ 31 ಸಂಸದರು, ಮಾಯಾವತಿಯ ಬಹುಜನ ಸಮಾಜ ಪಕ್ಷದ 11 ಮಂದಿ ಹಾಗೂ ಒಡಿಶಾದ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳದ 21 ಮಂದಿ ಎನ್ಡಿಎ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ.







