ಒಂದು ತಿಂಗಳಲ್ಲಿ 2 ನೇ ಬಾರಿ ಪ್ರಧಾನಿ ಮೋದಿಯವರ ಕಾರ್ಯಕ್ರಮದಿಂದ ದೂರ ಉಳಿಯಲು ನಿತೀಶ್ ಕುಮಾರ್ ನಿರ್ಧಾರ

Photo:PTI
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar)ಅವರು ಒಂದು ತಿಂಗಳಲ್ಲಿ ಎರಡನೇ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು NDTV ವರದಿ ಮಾಡಿದೆ.
ದಿಲ್ಲಿಯಲ್ಲಿ ಸೋಮವಾರ ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸರಕಾರದ ಚಿಂತಕರ ಚಾವಡಿ ನೀತಿ ಆಯೋಗದ ಸಭೆಯಲ್ಲಿ ಬಿಹಾರದಿಂದ ಯಾವುದೇ ಪ್ರತಿನಿಧಿ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಕೋವಿಡ್-19 ನಿಂದ ಚೇತರಿಸಿಕೊಂಡಿರುವ ಕುಮಾರ್ ಅವರು ತಮ್ಮ ಉಪ ಮುಖ್ಯಮಂತ್ರಿಯನ್ನು ಕಳುಹಿಸಲು ಬಯಸಿದ್ದರು. ಆದರೆ ಈ ಕಾರ್ಯಕ್ರಮವು ಕಟ್ಟುನಿಟ್ಟಾಗಿ ಮುಖ್ಯಮಂತ್ರಿಗಳಿಗೆ ಮಾತ್ರ ಎಂದು ತಿಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಅಧಿಕಾರಿಗಳ ಪ್ರಕಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ತಮ್ಮ ಜನತಾ ದರ್ಬಾರ್ ನಡೆಸಲು ಸಜ್ಜಾಗಿದ್ದಾರೆ. ಅಲ್ಲಿ ಅವರು ತಮ್ಮ ಮತದಾರರನ್ನು ಭೇಟಿ ಮಾಡಲಿದ್ದಾರೆ.
ರಾಜ್ಯ ಅಭಿವೃದ್ಧಿ ಶ್ರೇಯಾಂಕದಲ್ಲಿ ಬಿಹಾರವನ್ನು ಕೆಳಭಾಗದಲ್ಲಿ ಇರಿಸಿರುವ ನೀತಿ ಆಯೋಗದ ಬಗ್ಗೆ ಕುಮಾರ್ ಬಹಳ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಕಳೆದ ತಿಂಗಳು, ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟದಿಂದ ಮುಖ್ಯಮಂತ್ರಿ ದೂರ ಉಳಿದಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದ ಮುಖ್ಯಮಂತ್ರಿಗಳ ಸಭೆಗೆ ತಮ್ಮ ಉಪ ಮುಖ್ಯಮಂತ್ರಿಯನ್ನುಕಳುಹಿಸಿಕೊಟ್ಟಿದ್ದರು.







