ಬಿಜೆಪಿಗೆ ಜನರ ಬಗ್ಗೆ ಅಲ್ಲ ಪಕ್ಷದ ಬಗ್ಗೆ ಮಾತ್ರ ಚಿಂತೆ; ಅತಿವೃಷ್ಠಿ ಬಗ್ಗೆ ವಿಶೇಷ ತಂಡ ರಚಿಸಲು ಯು.ಟಿ.ಖಾದರ್ ಒತ್ತಾಯ
"ಅಮಿತ್ ಶಾ ರಾಜ್ಯಕ್ಕೆ ಬಂದರೂ ಅತಿವೃಷ್ಠಿಗೆ ಪರಿಹಾರ ಕೇಳದ ಬಿಜೆಪಿ"

ಮಂಗಳೂರು, ಆ.6: ದ.ಕ. ಜಿಲ್ಲೆಯ ಸುಳ್ಯದ ಸಂಪಾಜೆ, ಆನೆಗುಂಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅತಿವೃಷ್ಠಿಯಿಂದ ಜನರು ಸಂಕಷ್ಟಪಡುತ್ತಿದ್ದಾರೆ. ಇವರಿಗೆ ತಾತ್ಕಾಲಿಕ ಪರಿಹಾರವನ್ನು ನೀಡುವ ಬಗ್ಗೆ ರಾಜ್ಯ ಸರಕಾರ ಯಾವುದೇ ಕಾಳಜಿ ತೋರುತ್ತಿಲ್ಲ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾತನಾಡಿದ ಶಾಸಕ ಖಾದರ್, ಪ್ರಾಕೃತಿಕ ವಿಕೋಪಕ್ಕೆ ಪರಿಹಾರವನ್ನು ಎನ್‌ಡಿಆರ್‌ಫ್‌ನಿಂದ ನೀಡಲಾಗುತ್ತದೆ. ಅದರ ಮುಖ್ಯಸ್ಥರಾದ ಕೇಂದ್ರದ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾಗ ಕೇವಲ ಪಕ್ಷದ ಬಗ್ಗೆ ಮಾತ್ರ ಚರ್ಚಿಸಿದ್ದಾರೆ. ಜನರ ಸಂಕಷ್ಟಗಳ ಬಗ್ಗೆ ಚರ್ಚಿಸಿಲ್ಲ. ಎನ್‌ಡಿಆರ್‌ಎಫ್‌ನಡಿ ಕೇಂದ್ರದಿಂದ ರಾಜ್ಯದ ಹಕ್ಕನ್ನು ಕೇಳುವ ನಿಟ್ಟಿನಲ್ಲಿ ಮನವಿ ಸಲ್ಲಿಸಲಾಗಿಲ್ಲ. ರಾಜ್ಯದ 25 ಸಂಸದರು ಮೌನವಾಗಿದ್ದರು. ಇದು ಜನತೆಗೆ ಮಾಡಿರುವ ಅವಮಾನ ಎಂದರು.
ಪ್ರಕೃತಿ ವಿಕೋಪ ಎಷ್ಟು ದಿನ ಮುಂದುವರಿಯಲಿದೆ ಎಂದು ತಿಳಿಯುತ್ತಿಲ್ಲ. ಗುಡ್ಡನಾಡು, ಸಮುದ್ರ ಅಂಚಿನಲ್ಲಿರುವ ಜನರು ಭಯದಿಂದಲೇ ಜೀವಿಸುವಂತಾಗಿದೆ. ಕಳೆದ ಸುಮಾರು ಒಂದು ತಿಂಗಳಿನಿಂದೀಚೆಗೆ ಮಳೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಸಮುದ್ರ ಕೊರೆತ ಪ್ರದೇಶಗಳಿಗೆ ರಾಜ್ಯದ ಸಚಿವರು ಆಗಮಿಸಿ ತೆರಳಿದ್ದಾರರಾದರೂ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಸುಳ್ಯ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಗುತ್ತಿರುವ ಪ್ರಾಕೃತಿಕ ವಿಕೋಪದ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಮನೆ, ಕೃಷಿ ಕಳೆದುಕೊಂಡವರಿಗೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ನೀಡುವ ಬಗ್ಗೆ ಯಾವುದೇ ಕ್ರಮ ವಹಿಸಲಾಗಿಲ್ಲ ತುರ್ತು ಸಂದರ್ಭದಲ್ಲಿ ಜನರಿಗೆ ಧೈರ್ಯ ತುಂಬುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಅತಿವೃಷ್ಠಿಯಿಂದ ಮಡಿಕೇರಿ, ಸುಳ್ಯ ಭಾಗದಲ್ಲಿ ತೊಂದರೆಗೊಳಗಾದವರಿಗೆ ತುರ್ತು ಪರಿಹಾರ ನೀಡಲಾಗಿತ್ತು. ಆ ಸಂದರ್ಭದಲ್ಲಿ ವಸತಿ ಸಚಿವನೂ ಆಗಿದ್ದ ತಾನು ಎರಡು ಬೆಡ್‌ರೂಂಗಳ ಮನೆಯನ್ನು ನಿರ್ಮಿಸಿ ಕೊಡಲಾಗಿತ್ತು. ತುರ್ತು ಪರಿಹಾರವಾಗಿ ಮನೆ ನಿರ್ಮಾಣ ಆಗುವವರೆಗೆ ಸಂತ್ರಸ್ತರಿಗೆ ಮಾಸಿಕ 10 ಸಾವಿರ ರೂ.ನಂತೆ ಮನೆ ಬಾಡಿಗೆ ನೀಡುವ ಕಾರ್ಯವಾಗಿತ್ತು. ಆದರೆ ಇದೀಗ ಮನೆ ನಿರ್ಮಾಣಕ್ಕೆ ನೀಡುವ ಹಣವನ್ನು 10 ಲಕ್ಷರೂ.ನಿಂದ 5 ಲಕ್ಷ ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಅದನ್ನೂ ನೀಡಲಾಗುತ್ತಿಲ್ಲ ಎಂದು ಬೇಸರಿಸಿದರು.
ಕೋಮು ಸೂಕ್ಷ್ಮ ಘಟನೆಗಳ ಸಂದರ್ಭ ಯಾವುದೇ ತೀರ್ಮಾನ ತೆಗೆಕೊಳ್ಳುವಾಗ ಶೇ. 3ರಷ್ಟು ಸಮಾಜ ಘಾತುಕ ಶಕ್ತಿಗಳಿಂದ ಆಗುವ ಅನಾಹುತಗಳಿಗೆ ಶೇ. 97ರಷ್ಟು ಸಾಮಾನ್ಯ ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಿಸಲು ಗುಪ್ತಚರ ಇಲಾಖೆಯನ್ನು ಬಲಪಡಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಅನಗತ್ಯವಾಗಿ ತಿರುಗುವ ರೌಡಿಗಳನ್ನು ಬೆನ್ನತ್ತಿ ಭಯ ಹುಟ್ಟಿಸುವ ಕೆಲಸವಾಗಬೇಕು. ಜನಸಾಮಾನ್ಯರು ನೆಮ್ಮದಿಯಿಂದ ತಮ್ಮ ವ್ಯಾಪಾರ ವಹಿವಾಟು ಮಾಡಲು ಅಗತ್ಯವಾದ ಕ್ರಮ ವಹಿಸಬೇಕು. ಆದರೆ ಬಿಜೆಪಿ ಸರಕಾರ ಶೇ. 3ರಷ್ಟು ಸಮಾಜ ಘಾತುಕ ಶಕ್ತಿಗಳಿಗೆ ಭಯಬಿದ್ದು, ಉಳಿದ ಸಾಮಾನ್ಯ ಜನರಿಗೆ ತೊಂದರೆ ನೀಡುತ್ತಿದೆ ಎಂದು ಯು.ಟಿ.ಖಾದರ್ ದೂರಿದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಸಾಧಕ ಬಾಧಕ ಚರ್ಚಿಸಿ ಜಿಲ್ಲೆಗೆ ಪೂರಕವಾದ ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಎನ್‌ಡಿಆರ್‌ಎಫ್‌ನಿಂದ ಅಗತ್ಯ ಅನುದಾನಕ್ಕೆ ಮನವಿ ನೀಡಲು ರಾಜ್ಯ ಸರಕಾರಕ್ಕೆ ಆಗದಿದ್ದಲ್ಲಿ ಸರ್ವ ಪಕ್ಷಗಳ ನಿಯೋಗವನ್ನು ಕರೆದೊಯ್ಯಲಿ. ನಾವು ಜನರ ಪರವಾಗಿ ಮಾನತಾಡುತ್ತೇವೆ ಎಂದು ಯು.ಟಿ.ಖಾದರ್ ಹೇಳಿದರು.
ಗೋಷ್ಠಿಯಲ್ಲಿ ಶಾಹುಲ್ ಹಮೀದ್, ಮುಹಮ್ಮದ್ ಮೋನು, ಗೋಪಾಲ, ಫಾರೂಕ್, ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
ಸಿಎಂ ಸುಳ್ಳು ಹೇಳಲಾರರು
ಇತ್ತೀಚೆಗೆ ಕೋಮು ದ್ವೇಷಕ್ಕೆ ಬಲಿಯಾದ ಮುಹಮ್ಮದ್ ಫಾಝಿಲ್ ಮನೆಗೆ ಸಿಎಂ ಭೇಟಿಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಈಗಾಗಲೇ ಹತ್ಯೆಯಾದ ಎಲ್ಲರ ಮನೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಅವರಿಗೆ ಸಮಯಾವಕಾಶ ನೀಡೋಣ. ಮುಖ್ಯಮಂತ್ರಿ ಸುಳ್ಳು ಹೇಳಲಾರರು ಎಂಬ ನಂಬಿಕೆ ಇದೆ. ನಾವು ಅಧಿಕಾರದಲ್ಲಿ ಇದ್ದಾಗ ಈ ರೀತಿ ಹತ್ಯೆಯಾದವರ ಪರಿಹಾರದಲ್ಲಿ ತಾರತಮ್ಯ ಮಾಡಿಲ್ಲ. ಹತ್ಯೆಯಾದ ಅಶ್ರಫ್, ಶರತ್, ದೀಪಕ್ ರಾವ್, ಬಶೀರ್ ಎಲ್ಲರಿಗೂ ಪರಿಹಾರ ನೀಡಲಾಗಿದೆ ಎಂದು ಹೇಳಿದರು.