ಶ್ರೀಮಂತರ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಕೇಂದ್ರ ಬಡವರ ಮೇಲೆ ತೆರಿಗೆ ಬರೆ ಎಳೆಯುತ್ತಿದೆ: ಭಾಸ್ಕರ್ ರಾವ್ ವಾಗ್ದಾಳಿ

ಬೆಂಗಳೂರು, ಆ.6: ಕೇಂದ್ರ ಸರಕಾರವು ಕಳೆದ ಐದು ವರ್ಷಗಳಲ್ಲಿ ದೊಡ್ಡ ಕಂಪನಿ ಮತ್ತು ಉದ್ದಿಮೆದಾರರಿಗೆ 10 ಲಕ್ಷ ಕೋಟಿ ರೂ.ಗಳ ಬೃಹತ್ ಮೊತ್ತದ ಸಾಲವನ್ನು ಮನ್ನಾ ಮಾಡಿದೆ. ಬಡವರ ಮೇಲೆ ತೆರಿಗೆ ಬರೆ ಎಳೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ನಿವೃತ್ತ ಪೊಲೀಸ ಅಧಿಕಾರಿ ಭಾಸ್ಕರ್ ರಾವ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಕೇವಲ ಶ್ರೀಮಂತರಿಗಾಗಿ ಉಪಯೋಗವಾಗುವಂತಹ ಹಣಕಾಸು ನೀತಿಗಳನ್ನು ಜಾರಿ ಮಾಡುತ್ತಿದೆ. ಇದರಿಂದ ಅವರ ಆದಾಯ ಹೆಚ್ಚಾಗಲು ಕಾರಣವಾಗುತ್ತಿದೆ. ಈಗ ಈ ಉದ್ದಿಮೆದಾರರ ಸಾಲ ಮನ್ನಾವನ್ನು ಮಾಡಿದೆ. ಆದರೆ ಸದಾ ಸಮಸ್ಯೆಗಳಿಂದ ಬಳಲುತ್ತಿರುವ ರೈತರು, ಕಾರ್ಮಿಕರು ಸೇರಿ ಸಾಮಾನ್ಯರನ್ನು ಕಡೆಗಣಿಸಲಾಗಿದೆ ಎಂದರು.
ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದ ದೊಡ್ಡ ದೊಡ್ಡ ಉದ್ದಿಮೆದಾರರು ಬ್ಯಾಂಕುಗಳಲ್ಲಿ ಸಾಲ ಪಡೆದು ಮರುಪಾವತಿಸದೆ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಮೃದು ಧೋರಣೆ ಹೊಂದಿದ್ದು, ಪರೋಕ್ಷವಾಗಿ ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸರಕಾರ ಸುಮಾರು ವರ್ಷಗಳಿಂದ ಸಾಲದ ಕೂಪದಲ್ಲಿ ಸಿಲುಕಿರುವ ರೈತರ ಸಾಲ ಮನ್ನಾ ಮಾಡುವುದಿಲ್ಲ. ಏಕೆಂದರೆ ರೈತರ ಅಭಿವೃದ್ಧಿ ಬಿಜೆಪಿ ಸರಕಾರಕ್ಕೆ ಬೇಕಾಗಿಲ್ಲ. ಆದುದರಿಂದಲೇ ಜನವಿರೋಧಿ ನೀತಿಗಳನ್ನು ನಿರಂತರವಾಗಿ ಜಾರಿಗೊಳಿಸುತ್ತಿದೆ ಎಂದ ಅವರು, ದೇಶದಲ್ಲಿರುವ ರೈತರು, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರು, ಚಿಕ್ಕ ವ್ಯಾಪಾರಸ್ಥರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಕೂಡಲೆ ಕೇಂದ್ರ ಸರಕಾರ ಬಡವರ ಆರ್ಥಿಕ ಜೀವನ ಸದೃಢಗೊಳ್ಳಲು ಹೊಸ ನೀತಿಗಳನ್ನು ತರಬೇಕು. ರೈತರ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಕಮ್ಮರಡಿ, ಮೈಕಲ್ ಫರ್ನಾಂಡಿಸ್, ಬಿ.ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.







