ಧನ್ಬಾದ್ ನ್ಯಾಯಾಧೀಶರ ಕೊಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಧನ್‌ಬಾದ್: ಜಾರ್ಖಂಡ್‌ನ ಧನ್‌ಬಾದ್‌ನ ಸೆಷನ್ಸ್ ನ್ಯಾಯಾಲಯವು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ಹತ್ಯೆಗೈದ ಲಖನ್ ವರ್ಮಾ ಮತ್ತು ರಾಹುಲ್ ವರ್ಮಾ ಅವರಿಗೆ ಮರಣದವರೆಗೂ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ ಎಂದು ಡಿಫೆನ್ಸ್ ವಕೀಲ ಕುಮಾರ್ ಬಿಮ್ಲೇಂದು ಶನಿವಾರ ಹೇಳಿದ್ದಾರೆ. ತಪ್ಪಿತಸ್ಥರೆಂದು ಸಾಬೀತಾದ ಇಬ್ಬರೂ ಅಪರಾಧಿಗಳಿಗೆ 30,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ ಎಂದು thenewIndianexpress.com ವರದಿ ಮಾಡಿದೆ.
ನ್ಯಾಯಾಧೀಶ ಆನಂದ್ ಅವರು ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಆಟೋ ಡಿಕ್ಕಿ ಹೊಡೆದು ಅವರನ್ನು ಹತ್ಯೆಗೈದಿದ್ದರು. ಡಿಕ್ಕೆ ಹೊಡೆದ ರಭಸಕ್ಕೆ ಆನಂದ್ ಅವರ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಬಳಿಕ ಸಾವನ್ನಪ್ಪಿದ್ದರು. ಇದಾದ ಒಂದು ವರ್ಷದ ನಂತರ ಶಿಕ್ಷೆ ಪ್ರಕಟವಾಗಿದೆ.
ವಿಚಾರಣೆಯ ಸಮಯದಲ್ಲಿ, ಸಂತ್ರಸ್ತರ ಮೊಬೈಲ್ ಫೋನ್ ಅನ್ನು ಕಸಿದುಕೊಳ್ಳುವುದು ಅಪರಾಧದ ಉದ್ದೇಶವಾಗಿತ್ತು ಎಂದು ಪ್ರಾಸಿಕ್ಯೂಷನ್ ಹೇಳಿತ್ತು. ಇದು ಪೂರ್ವಯೋಜಿತ ಕೃತ್ಯವಾಗಿದ್ದು, ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಶಿಕ್ಷೆಗೆ ಅರ್ಹವಾಗಿದೆ ಎಂದು ಪ್ರತಿವಾದ ಮಂಡಿಸಿತ್ತು.
ತೀರ್ಪಿನ ನಂತರ, ಡಿಫೆನ್ಸ್ ಕೌನ್ಸಿಲ್ ಕುಮಾರ್ ಬಿಮ್ಲೇಂಡು “ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು ಕೊಲೆಯ ತಪ್ಪಿತಸ್ಥರೆಂದು ಘೋಷಿಸಿದ್ದಾರೆ. ಉದ್ದೇಶಪೂರ್ವಕವಾಗಿಯೇ ಆಟೊ ನ್ಯಾಯಾಧೀಶರತ್ತ ಹರಿದು ಬಂದು ಡಿಕ್ಕಿ ಹೊಡೆದು ಸಾವಿಗೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿ ಶರವಣಕುಮಾರ್ ಹೇಳಿಕೆಯನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ. ನ್ಯಾಯಾಲಯವು ಸಿಎಫ್‌ಎಸ್‌ಎಲ್ ವರದಿಯ ಮೇಲೆ ಅವಲಂಬಿತವಾಗಿದೆ, ಅದು ಕೃತ್ಯದ ಸಮಯದಲ್ಲಿ ಇಬ್ಬರೂ ಆರೋಪಿಗಳು ಕುಡಿದಿರಲಿಲ್ಲ ಎಂದು ಹೇಳಿತ್ತು.” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಜಾರ್ಖಂಡ್ ಪೊಲೀಸರು ಧನ್‌ಬಾದ್‌ನ ದಿಗ್ವಾಡಿಹ್ ನಿವಾಸಿಗಳಾದ ಲಖನ್ ವರ್ಮಾ ಮತ್ತು ರಾಹುಲ್ ವರ್ಮಾ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 201 (ಅಪರಾಧದ ಸಾಕ್ಷ್ಯಾಧಾರಗಳು ಕಣ್ಮರೆಯಾಗಲು ಕಾರಣ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಆರೋಪ ಹೊರಿಸಿದ್ದರು. ಅಪಘಾತವು ಪೂರ್ವಯೋಜಿತ ಹಿಟ್ ಅಂಡ್ ರನ್ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದರು.