ಕುಟುಂಬಗಳು ಮಕ್ಕಳ ಬೆಳವಣಿಗೆಯ ಕೇಂದ್ರ: ನ್ಯಾ.ಶರ್ಮಿಳಾ

ಉಡುಪಿ, ಆ.6: ಕುಟುಂಬಗಳು ಮಕ್ಕಳ ಬೆಳವಣಿಗೆಯ ಕೇಂದ್ರವಾಗಿವೆ. ಕುಟುಂಬವು ಪರಸ್ಪರ ಪ್ರೀತಿಸಲು, ಸ್ಪಂದಿಸಲು ಕಲಿಸುತ್ತದೆ. ನಮ್ಮ ಕುಟುಂಬವನ್ನು ಪರಸ್ಪರ ಗೌರಾವಧಾರದಿಂದ ನೋಡಿಕೊಂಡರೆ ಸುಧೃಡ ಕುಟುಂಬ ಕಟ್ಟಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್. ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ವತಿಯಿಂದ ಸುಧೃಡ ಕುಟುಂಬ- ಸುಧೃಡ ಸಮಾಜ ಎಂಬ ವಿಷಯದಲ್ಲಿ ಶುಕ್ರವಾರ ಉಡುಪಿಯ ದುರ್ಗಾ ಇಂಟರ್ನ್ಯಾಷನಲ್ ಹೊಟೇಲಿನಲ್ಲಿ ಆಯೋಜಿಸಲಾದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಹಿರಿಯ ವಕೀಲರು ಮತ್ತು ಚೈಲ್ಡ್ ವೆಲ್ಫೇರ್ ಕಮಿಟಿಯ ಅಧ್ಯಕ್ಷ ರೋನಾಲ್ಡ್ ಫುರ್ಟಾಡೊ ಮಾತನಾಡಿ, ಸಾಮಾಜಿಕ ಸುಧಾರಣೆಗೆ ಕುಟುಂಬ ಅತೀ ಅಗತ್ಯ. ಭಾರತೀಯ ಸಮಾಜದಲ್ಲಿ ವಿಭಕ್ತ, ಅವಿಭಕ್ತ ಕುಟುಂಬಗಳಿವೆ. ಕುಟುಂಬದಲ್ಲಿ ಇತ್ತೀಚಿನ ದಿನಗಳಲ್ಲಿ ಮೌಲ್ಯಗಳನ್ನು ಮರೆತಂತೆ ಭಾಸವಾಗುತ್ತದೆ. ಸುಧೃಡ ಕುಟುಂಬದಲ್ಲಿರುವ ಮಕ್ಕಳು ಹಿರಿಯರಿಂದ ಪ್ರೀತಿ, ವಿಶ್ವಾಸ ಪಡೆದು ಬಲಾಢ್ಯ ರಾಗಿ ಬೆಳೆಯುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಮಾತನಾಡಿ, ಸಮಾಜದ ಪ್ರಬಲ ಸಂಸ್ಥೆ ಕುಟುಂಬ. ಆದುದರಿಂದ ಕುರಾನಿನಲ್ಲಿ ಕುಟುಂಬ ಸಂಬಂಧವನ್ನು ಹಾಳು ಮಾಡಬೇಡಿ ಎಂದು ಹೇಳಲಾಗಿದೆ. ಕುಟುಂಬ ಶಿಥಿಲವಾದರೆ ಸಮಾಜ ಹಾಳಾಗುತ್ತದೆ. ಕುಟುಂಬದಲ್ಲಿ ನಿಗೂಢತೆ ಗಳು ಇಲ್ಲದೆ ಪಾರದರ್ಶಕತೆ ಇದ್ದರೆ ಸುಧೃಡ ಕುಟುಂಬ ನಿರ್ಮಾಣ ಸಾಧ್ಯವಾಗುತ್ತದೆ. ಪತಿ-ಪತ್ನಿಯ ನಡುವೆ ಯಾವುದೇ ನಿಗೂಢತೆ ಇರಬಾರದು ಇದರಿಂದಾಗಿ ಸಂಬಂಧಗಳು ಸುಧಾರಿಸುತ್ತವೆ ಎಂದರು.
ಉಡುಪಿ ಮಹಿಳಾ ಪೊಲೀಸ್ ಠಾಣೆಯ ಉಪನಿರೀಕ್ಷಕಿ ವೈಲೆಟ್ ಫೆಮಿನಾ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಉಡುಪಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಜಿದಾ ಉಡುಪಿ ವಂದಿಸಿದರು. ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.







