ಅಶಕ್ತರ ಬಾಳಿಗೆ ಬೆಳಕಾಗುವುದು ದೇವರು ಮೆಚ್ಚುವ ಕೆಲಸ: ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ್ಹಾ

ಮಂಗಳೂರು, ಆ.6: ಅಶಕ್ತರ ಬಾಳಿಗೆ ಬೆಳಕಾಗುವುದು ದೇವರು ಮೆಚ್ಚುವ ಕೆಲಸ ಎಂದು ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ್ಹಾ ಹೇಳಿದ್ದಾರೆ.
ಶನಿವಾರದಂದು ಮಂಗಳೂರಿನ ಬಿಷಪ್ ಹೌಸ್‌ನಲ್ಲಿ ಕೆಥೋಲಿಕ್ ಅಸೋಸಿಯೇಷನ್ ಆಫ್ ಸೌತ್ ಕೆನರಾ (ಕಾಸ್ಕ್) ವತಿಯಿಂದ ೧೭.೫೦ ಲ.ರೂ. ಮೌಲ್ಯದ ವಿದ್ಯಾರ್ಥಿವೇತನ ವಿತರಿಸಿ ಅವರು ಮಾತನಾಡಿದರು.
‘ಕಾಸ್ಕ್’ ಅಂಕಗಳನ್ನು ಪರಿಗಣಿಸದೆ ಕುಟುಂಬದ ಸ್ಥಿತಿಯನ್ನು ಗಮನಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ. ಇದು ಹೊಸ ರೀತಿಯ ಮಾದರಿ ಕಾರ್ಯ. ದಾನಿಗಳ ಸಹಕಾರ ಶ್ಲಾಘನೀಯ. ಯಾವುದೇ ಭೇದಭಾವ ಮಾಡದೆ ಸಮಾಜದ ಎಲ್ಲರೂ ನಮ್ಮವರೆಂದು ತಿಳಿದು ಸ್ಪಂದಿಸಬೇಕು. ಅದು ನಮ್ಮ ವ್ಯಕ್ತಿತ್ವ, ಮೌಲ್ಯವನ್ನು ಬೆಳೆಸುತ್ತದೆ. ಆಗ ಹೃದಯ ವೈಶಾಲ್ಯತೆ ಉಂಟಾಗುತ್ತದೆ. ವಿದ್ಯಾರ್ಥಿಗಳು ತಾವು ಪಡೆಯುತ್ತಿರುವ ಸಹಾಯವನ್ನು ನೆನಪಿಟ್ಟುಕೊಂಡು ಮುಂದಿನ ದಿನಗಳಲ್ಲಿ ತಮ್ಮಂತೆ ಕಷ್ಟದಲ್ಲಿರಬಹುದಾದ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದು ಬಿಷಪ್ ಹೇಳಿದರು.
141 ವಿದ್ಯಾರ್ಥಿಗಳಿಗೆ ನೆರವು
ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ/ಹೆತ್ತವರು ರೋಗಕ್ಕೆ ತುತ್ತಾಗಿರುವ/ ಒಬ್ಬರೇ ಹೆತ್ತವರು ಇರುವ ಮೊದಲಾದ ಸಂಕಷ್ಟದಲ್ಲಿರುವ ಉಡುಪಿ, ಚಿಕ್ಕಮಗಳೂರು, ಮಂಗಳೂರು ಮತ್ತು ಬೆಂಗಳೂರಿನ ವಿವಿಧ ಧರ್ಮಗಳ ಒಟ್ಟು ೧೪೧ ಮಂದಿ ವಿದ್ಯಾರ್ಥಿಗಳಿಗೆ ಒಟ್ಟು ೧೭.೫೦ ಲ.ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ಈ ಪೈಕಿ ೧೧೧ ಮಂದಿಗೆ ವಾರ್ಷಿಕ ವಿದ್ಯಾರ್ಥಿವೇತನ, ಕೋವಿಡ್‌ನಿಂದ ತಂದೆ/ತಾಯಿಯನ್ನು ಕಳೆದುಕೊಂಡ ಅಥವಾ ಕೋವಿಡ್‌ನಿಂದ ತುಂಬಾ ತೊಂದರೆಗೊಳಗಾದ ೩೦ ವಿದ್ಯಾರ್ಥಿಗಳಿಗೆ ಕೋವಿಡ್ ನೆರವು ವಿದ್ಯಾರ್ಥಿವೇತನ ವಿತರಿಸಲಾಯಿತು.
‘ಕಾಸ್ಕ್’ ಅಧ್ಯಕ್ಷ ಕ್ಯಾ. ವಿನ್ಸೆಂಟ್ ಪಾಯಸ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಾ. ಡೆರಿಕ್ ಲೋಬೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ. ಆನಂದ್ ಪಿರೇರಾ ವಂದಿಸಿದರು. ನಯನಾ ಫೆರ್ನಾಂಡಿಸ್ ಮತ್ತು ರತ್ನಾ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು.