ಎಷ್ಟೇ ಪ್ರಭಾವಿ ನಾಯಕರಿದ್ದರೂ ಪಕ್ಷಕ್ಕೆ ಮುಜುಗರ ಸೃಷ್ಟಿಸಿದರೆ ಕ್ರಮ: ಮಾಜಿ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ, ಆ. 6: ‘ಎಷ್ಟೇ ಪ್ರಭಾವಿ ನಾಯಕರಿದ್ದರೂ ಪಕ್ಷಕ್ಕೆ ಮುಜುಗರ ಸೃಷ್ಟಿಸುವ ಹೇಳಿಕೆಗಳನ್ನು ಯಾರೇ ನೀಡಿದರೂ ಅವರ ವಿರುದ್ಧ ನಿಶ್ಚಿತವಾಗಿಯೂ ಕ್ರಮ ಜರುಗಿಸಲಾಗುವುದು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಪಾದಯಾತ್ರೆ ನಡೆದಿದೆ. ಆ.9ರಂದು ನಗರದ ಕಾಂಗ್ರೆಸ್ ಭವನದಲ್ಲಿ ಸಮಾರೋಪ ಸಮಾವೇಶ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆಯಾಗುವುದಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್‍ನಿಂದ ಬಿಜೆಪಿ ಶಾಸಕರಿಗೆ ಮೇಯರ್ ‘ಗೌನ್' ಉಡುಗೊರೆ ನೀಡಲಾಗುವುದು' ಎಂದು ಸತೀಶ್ ಜಾರಕಿಹೊಳಿ ಇದೇ ವೇಳೆ ತಿರುಗೇಟು ನೀಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದೇವೆ. ಅದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಪಕ್ಷದ ನಾಯಕನನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ, ಅದರಲ್ಲಿ ಏನೂ ಮುಚ್ಚು ಮರೆ ಇಲ್ಲ. ಆದರೆ, ಮಾಧ್ಯಮಗಳಲ್ಲಿ ಬೇರೆ ರೀತಿಯಲ್ಲಿ ಸುದ್ದಿ ಬಿತ್ತರ ಮಾಡುತ್ತಿದ್ದಾರೆ' ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.







