ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು : ಸಚಿವ ಸುನಿಲ್ ಕುಮಾರ್
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪೂರ್ವ ಸಿದ್ಧತಾ ಸಭೆ

ಮಂಗಳೂರು : ಭಾರತದ ಸ್ವಾತಂತ್ರ್ಯೋತ್ಸವದ 75ನೇ ಅಮೃತ ವರ್ಷಾಚರಣೆಯನ್ನು ಆ.13ರಿಂದ 15ರ ವರೆಗೆ ಅರ್ಥಪೂರ್ಣವಾಗಿ ಆಚರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯದ ಭಾಗವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಶನಿವಾರ ಉರ್ವಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಈ ಕಾರ್ಯಕ್ರಮ ಕೇವಲ ಸರ್ಕಾರಿ ಕಾರ್ಯಕ್ರಮದಂತೆ ಆಗಬಾರದು. ಇದಕ್ಕಾಗಿ ಕಳೆದ ಒಂದು ತಿಂಗಳಿಂದ ಸಿದ್ಧತೆ ನಡೆಸಲಾಗುತ್ತಿದೆ. ಇದನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಆ.8 ಮತ್ತು 9ರಂದು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿ ಮತ್ತು ನಗರ ಪ್ರದೇಶದ ವಾರ್ಡ್‌ಗಳಲ್ಲಿ ಪೂರ್ವ ತಯಾರಿ ಸಭೆ ನಡೆಸಬೇಕು. ಸ್ವಸಹಾಯ ಸಂಘ ಮತ್ತು ಯುವಕ, ಯುವತಿ ಮಂಡಲಗಳ ಮೂಲಕ ಮನೆಗಳಿಗೆ ಧ್ವಜ ತಲುಪಿಸುವ ಕೆಲಸ ಮಾಡಬೇಕು. ಆ.10 ಮತ್ತು 11ರಂದು ಎಲ್ಲ ಮನೆಗಳಿಗೆ ಏಕಕಾಲದಲ್ಲಿ ಧ್ವಜ ವಿತರಣೆ ನಡೆಸಬೇಕು ಎಂದರು.
ಆ.13ರಂದು ಎಲ್ಲರ ಮನೆ ಹಾಗೂ ಕಟ್ಟಡಗಳಲ್ಲಿ ರಾಷ್ಟ್ರಧ್ವಜಾರೋಹಣ ನಡೆಸಬೇಕು. ಇದು ಧ್ವಜ ಸಂಹಿತೆ ಅಡಿಯಲ್ಲಿ ನಡೆಯಬೇಕಿದ್ದು, ಮನೆ ಮಂದಿ ಎಲ್ಲರೂ ಸೇರಿ ಒಟ್ಟಾಗಿ ಧ್ವಜಾರೋಹಣ ನಡೆಸಬೇಕು. ಅದೇ ದಿನ ಅಥವಾ ಮುನ್ನಾ ದಿನ ಧ್ವಜಾರೋಹಣ ನಡೆಸಿದರೂ ಆಗಬಹುದು. ಧ್ವಜಕ್ಕೆ ಅಲಂಕಾರ ಮಾಡುವಂತಿಲ್ಲ, ಧ್ವಜ ಸಂಹಿತೆಯಂತೆ ಆರೋಹಣ ನಡೆಸಬೇಕು. ಎಲ್ಲಿಯೂ ಧ್ವಜಾರೋಹಣ ಲೋಪವಾಗದಂತೆ, ಧ್ವಜಕ್ಕೆ ಅವಮಾನ ಆಗದಂತೆ ಎಚ್ಚರ ವಹಿಸಬೇಕು ಎಂದರು.
ಸುಳ್ಯ, ಮಂಗಳೂರಲ್ಲಿ ವಿಶೇಷ ಕಾರ್ಯಕ್ರಮ
ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದಿರುವುದು ದ.ಕ. ಜಿಲ್ಲೆಯಲ್ಲಿ. ೧೮೫೭ರ ಸಿಪಾಯಿ ದಂಗೆಗೂ ಮೊದಲೇ 1837ರಲ್ಲಿ ಸುಳ್ಯದಲ್ಲಿ ಬ್ರಿಟಿಷರ ವಿರುದ್ಧ ರೈತರ ಕ್ರಾಂತಿ ನಡೆದ ಇತಿಹಾಸ ಇದೆ. ಇದುವೇ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆಗಿದೆ. ಹೀಗಾಗಿ ದ.ಕ.ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆ ವಿಶೇಷ ಮಹತ್ವ ಪಡೆದುಕೊಂಡಿದೆ. ರೈತ ದಂಗೆ ನಡೆದ ಸುಳ್ಯ ಹಾಗೂ 13 ದಿನಗಳ ಸ್ವಾತಂತ್ರ್ಯ ಗಳಿಸಿದ ಮಂಗಳೂರಿನ ಬಾವುಟಗುಡ್ಡೆ ಮತ್ತು ರೈತ ಹೋರಾಟಗಾರರನ್ನು ನೇಣಿಗೆ ಹಾಕಿದ ಬಿಕರ್ನಕಟ್ಟೆಯಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಒತ್ತು ನೀಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ಸಹಾಯಕ ಕಮಿಷನರ್ ಮದನಮೋಹನ್, ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್ ಉಪಸ್ಥಿತರಿದ್ದರು.
ಈ ಸಂದರ್ಭ ಸಭೆಯಲ್ಲಿದ್ದ ಗ್ರಾ.ಪಂ. ಹಾಗೂ ಪಾಲಿಕೆ ಹಾಗೂ ಸ್ಥಳೀಯ ನಗರಾಡಳಿತಗಳ ಅಧ್ಯಕ್ಷ, ಉಪಾಧ್ಯಕ್ಷರಿಗೆ ಧ್ವಜ ಹಸ್ತಂತರಿಸಲಾಯಿತು. ಸಭೆಗೆ ಮುನ್ನ ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸ್ವಾತಂತ್ರ್ಯದ ಅಮೃತೋತ್ಸವ ಧ್ವಜ ಮಾರಾಟದ ಕೌಂಟರ್‌ನ್ನು ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರು. ಈ ವೇಳೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಸಂಚಾರಿ ನಿಯಂತ್ರಕ ಮರಿ ಗೌಡ ಇದ್ದರು.
ಸ್ವಾತಂತ್ರ್ಯದ ಅಮೃತೋತ್ಸವದಲ್ಲಿ ಪಾಲ್ಗೊಳ್ಳಲು ಎಲ್ಲರೂ ಹಣ ತೆತ್ತು ಧ್ವಜ ಖರೀದಿಸಬೇಕು. ಯಾವುದೇ ಕಾರಣಕ್ಕೂ ಉಚಿತ ಧ್ವಜಕ್ಕೆ ಒತ್ತಾಯ ಮಾಡಬಾರದು. ಗ್ರಾಮೀಣ ಭಾಗದಲ್ಲಿ ಧ್ವಜ ಆರೋಹಣಕ್ಕೆ ಕಡ್ಡಿಗಳು ಸಿಗುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಧ್ವಜದ ಜತೆ ಕಡ್ಡಿಯನ್ನೂ ನೀಡಿದರೆ ಉತ್ತಮ. ಧ್ವಜವನ್ನು ಗ್ರಾಮ ಪಂಚಾಯ್ತಿ ಕೇಂದ್ರ ಹಾಗೂ ನಗರಡಾಳಿತ ಕೇಂದ್ರಗಳಿಂದ ಪಡೆಯಬಹುದು. ಮನೆ, ಕಟ್ಟಡಗಳಲ್ಲಿ ಧ್ವಜ ಆರೋಹಣದ ಫೋಟೋವನ್ನು ಜಿಲ್ಲಾಡಳಿತ ನೀಡುವ ಪ್ರತ್ಯೇಕ ವಾಟ್ಸ್‌ಆ್ಯಪ್ ನಂಬರಿಗೆ ಕಳುಹಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸಿದರೆ ಕೇಸ್, ಜೈಲು ಶಿಕ್ಷೆ
ರಾಷ್ಟ್ರಧ್ವಜವನ್ನು ಎಲ್ಲರೂ ಮನೆಗಳಲ್ಲಿ ಹಾಗೂ ಕಟ್ಟಡಗಳಲ್ಲಿ ಹಾರಾಟಕ್ಕೆ ತೊಂದರೆ ಇಲ್ಲ. ಆದರೆ ಧ್ವಜಸಂಹಿತೆಯನ್ನು ಪಾಲಿಸದಿದ್ದರೆ ಕೇಸು ಮತ್ತು ಜೈಲು ಶಿಕ್ಷೆ ಶತಸಿದ್ಧ. ಧ್ವಜ ಸಂಹಿತೆ ಪ್ರಕಾರ, ರಾಷ್ಟ್ರಧ್ವಜಕ್ಕೆ ಅಗೌರವ, ನಾಶ, ಅಪಕೀರ್ತಿ, ಹರಿದು ಹಾಕಿದರೆ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಇದೆ. ಇದಕ್ಕೆ ಯಾರದ್ದೇ ಅನುಮತಿಗೆ ಕಾಯಬೇಕಾಗಿಲ್ಲ. ಯಾರೇ ನಾಗರಿಕ ದೂರು ನೀಡಿದರೂ ಸಾಕಾಗುತ್ತದೆ. ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಅಟ್ಟಲು ಅವಕಾಶ ಇದೆ. ಕನಿಷ್ಠ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಆ.13ರಿಂದ 15ರ ವರೆಗೆ ಧ್ವಜಾರೋಹಣ ನಡೆಸಿ ಇಳಿಸಿದ ಬಳಿಕ ಧ್ವಜವನ್ನು ಎಸೆಯದೆ, ಜೋಪಾನವಾಗಿ ಮನೆಯಲ್ಲೇ ಇರಿಸಬೇಕು ಎಂದು ಸಿಇಒ ಡಾ.ಕುಮಾರ್ ಹೇಳಿದರು.
ಒಂದು ವಾರದಲ್ಲಿ ಎಲ್ಲ ಮನೆಗಳಿಗೆ ಧ್ವಜ
ಇನ್ನು ಒಂದು ವಾರದೊಳಗೆ ಜಿಲ್ಲೆಯಲ್ಲಿ ಎಲ್ಲರ ಮನೆಗಳಿಗೆ ರಾಷ್ಟ್ರಧ್ವಜವನ್ನು ತಲುಪಿಸಬೇಕು. ಧ್ವಜ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕಾಗಿದ್ದು, ಅಶಿಸ್ತಿನಿಂದ ವರ್ತಿಸುವಂತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಹರಿದ, ಕೊಳಕು ಧ್ವಜವನ್ನು ಆರೋಹಣ ಮಾಡಬಾರದು. ಸೊಂಟದ ಕೆಳಗೂ ಧ್ವಜ ಬಣ್ಣದ ವಸ್ತ್ರವನ್ನು ಧರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹೇಳಿದರು.