ಸ್ಮಾರ್ಟ್ ಸಿಟಿಯಲ್ಲಿ ಬಗೆಹರಿಯದ ನೀರಿನ ಸಮಸ್ಯೆ; ಮನಪಾ ಸಭೆಯಲ್ಲೇ ಸದಸ್ಯರಿಬ್ಬರ ಪ್ರತಿಭಟನೆ
► ಕೃತಕ ನೆರೆ, ಹೈವೇ, ಮೆಸ್ಕಾಂ ಸಮಸ್ಯೆಗಳದ್ದೇ ಚರ್ಚೆ ►ಆಡಳಿತ ಪಕ್ಷದ ಸದಸ್ಯರಿಂದಲೂ ಅಸಮಾಧಾನ

ಮಂಗಳೂರು, ಆ. 6: ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಮಳೆಗಾಲದಲ್ಲಿಯೂ ಕೆಲ ವಾರ್ಡ್‌ಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ, ಕೃತಕ ನೆರೆ, ಮೆಸ್ಕಾಂ ಸಮಸ್ಯೆಗಳು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ಆಕ್ಷೇಪಕ್ಕೆ ಕಾರಣವಾದವು.
ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆ ಆರಂಭಗೊಳ್ಳುವಾಗಲೇ ಕುದ್ರೋಳಿ ಮತ್ತು ಬಂದರು ಪ್ರದೇಶದ ಮನಪಾ ಸದಸ್ಯರು ತಮ್ಮ ವಾರ್ಡ್‌ನ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಭಿತ್ತಿ ಪತ್ರ ಹಿಡಿದು ಮೇಯರ್ ಪೀಠದೆದುರು ಮೌನ ಪ್ರತಿಭಟನೆಯ ಮೂಲಕ ಗಮನ ಸೆಳೆದರು.
ಸದಸ್ಯರಾದ ಸಂಶುದ್ದೀನ್ ಹಾಗೂ ಝೀನತ್ ಸಂಶುದ್ದೀನ್‌ರವರು ಪ್ರತಿಭಟನಾ ನಿರತರಾಗಿದ್ದನ್ನು ಗಮನಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ ಸಮಸ್ಯೆಯನ್ನು ಪ್ರಸ್ತಾವಿಸುವಂತೆ ತಿಳಿಸಿದರು.
ಸದಸ್ಯ ಸಂಶುದ್ದೀನ್ ಮಾತನಾಡಿ, ಕುದ್ರೋಳಿ ವಾರ್ಡ್‌ನ ನೀರಿನ ಸಮಸ್ಯೆ ಬಗ್ಗೆ ಕಳೆದ ಎರಡು ವರ್ಷಗಳಿಂದ ಮಾತನಾಡುತ್ತಿದ್ದೇನೆ. ಅಧಿಕಾರಿಗಳಿಗೆ ತಿಳಿಸುತ್ತಿದ್ದೇನೆ. ಆದರೆ ಸಮಸ್ಯೆ ಬಗೆಹರಿದಿಲ್ಲ ಎಂದರು.
ಆಡಳಿತ ಪಕ್ಷದ ಸದಸ್ಯ ಜಗದೀಶ್‌ರವರು ತಮ್ಮ ಬೋಳೂರಿನ ಕೆಲ ಪ್ರದೇಶಗಳಲ್ಲಿ ನೀರು ಬರುತ್ತಿಲ್ಲ ಎಂದು ಆಕ್ಷೇಪಿಸಿದರೆ, ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕೊಡಿಯಾಲ್‌ಬೈಲ್‌ನ ವಿವೇಕನಗರದ ಅರ್ಧ ಭಾಗಕ್ಕೆ ಒಂದೂವರೆ ತಿಂಗಳಿನಿಂದ ಹನಿ ನೀರು ಪೂರೈಕೆಯಾಗುತ್ತಿಲ್ಲ ಎಂದು ದೂರಿದರು.
ಕುಡಿಯುವ ನೀರಿನ ವಿಸ್ತರಣಾ ಜಾಲವನ್ನು ಕೆಯುಡಿಎಫ್‌ಸಿಯಿಂದ ಸರಿಪಡಿಸಿ ಎಲ್ಲಾ ಭಾಗಗಳಿಗೂ ನೀರು ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ. ಕುದ್ರೋಳಿ, ಬಂದರು ವಾರ್ಡ್‌ನ ಸಮಸ್ಯೆಯನ್ನೂ ಬಗೆಹರಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ಬೋಳೂರಿನಲ್ಲಿ ಇತ್ತೀಚೆಗೆ ಸಮಸ್ಯೆ ಆಗಿದ್ದು, ಪೂರೈಕೆಯಲ್ಲಿರುವ ಸೋರಿಕೆಯನ್ನು ಕಳೆದ ಒಂದು ವಾರದಿಂದ ಹುಡುಕಲಾಗುತ್ತಿದೆ ಎಂದು ಮನಪಾ ಅಧಿಕಾರಿಯೊಬ್ಬರು ತಿಳಿಸಿದರು.
ನೀರಿನ ದರ ಪರಿಷ್ಕರಣೆ ಒಂದು ವರ್ಷಕ್ಕೆ ಅನ್ವಯ
ನೀರಿನ ದರ ಪರಿಷ್ಕರಣೆಗೆ ಸಂಬಂಧಿಸಿ 2019ರಲ್ಲಿ ಮನಪಾದಿಂದ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಸರಕಾರ ತಿರಸ್ಕರಿಸಿತ್ತು. ಇದೀಗ 2021ರಲ್ಲಿ 20000 ಲೀಟರ್‌ಗೆ 100 ರೂ.ಗಳ ದರದ ಪ್ರಸ್ತಾವನೆಗೆ ಸರಕಾರ ಮನ್ನಣೆ ನೀಡಿದೆ. ಆಗಸ್ಟ್ 1ರಿಂದ ಈ ದರ ಅನ್ವಯವಾಗಲಿದೆ. ಪರಿಷ್ಕೃತ ದರ ಒಂದು ವರ್ಷದ ಅವಧಿಗೆ ಅನ್ವಯವಾಗಲಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಸಭೆಯ ಆರಂಭದಲ್ಲಿ ತಿಳಿಸಿದರು.
ಪರಿಷ್ಕೃತ ನೀರಿನ ದರ ಅವಧಿ ಬಗ್ಗೆ ಮಾಹಿತಿ ನೀಡಬೇಕೆಂದು ಪ್ರತಿಪಕ್ಷದ ಸದಸ್ಯ ನವೀನ್ ಡಿಸೋಜಾ ಆಗ್ರಹಿಸಿದಾಗ, ಒಂದು ವರ್ಷದ ಅವಧಿಗೆ ಈ ದರ ಅನ್ವಯವಾಗಲಿದೆ. ಬಳಿಕ ಮತ್ತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬಹುದು. ಇದರ ಬಗ್ಗೆ ಗೊಂದಲ ಬೇಡ ಎಂದು ಮೇಯರ್ ಉತ್ತರಿಸಿದರು.
ದರ ಕಡಿಮೆ ಮಾಡಿರುವುದು ಒಳ್ಳೆಯ ವಿಚಾರ. ಆದರೆ ಕಳೆದ ಎರಡು ವರ್ಷಗಳಿಂದ ಪ್ರತಿಪಕ್ಷದ ಸದಸ್ಯರು ಈ ಬಗ್ಗೆ ಸದನದಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಈಗ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ದರ ಪರಿಷ್ಕರಣೆ ಮಾಡಿರುವುದು ಅರ್ಥವಾಗುತ್ತದೆ ಎಂದು ಪ್ರತಿಪಕ್ಷ ಸದಸ್ಯರಾದ ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ ಸೇರಿದಂತೆ ಹಲವರು ಆಕ್ಷೇಪಿಸಿದರು.
ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಮಾತನಾಡಿ, ಇಡೀ ರಾಜ್ಯದಲ್ಲಿಯೇ 20000 ಲೀಟರ್‌ಗೆ 100 ರೂ.ನಲ್ಲಿ ವಿಶೇಷ ದರ ಮಂಗಳೂರಿಗೆ ಮಾತ್ರ ಅನ್ವಯವಾಗಿದೆ ಎಂದರು.
ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಮಂಗಳೂರು. ಇಲ್ಲಿ ನೀರು ಉಚಿತವಾಗಿ ನೀಡಬಹುದು. ನಮ್ಮ ಸರಕಾರವಿದ್ದಾಗ 24000 ಲೀಟರ್‌ಗೆ 65 ರೂ. ದರದಲ್ಲಿ ನೀಡಲಾಗುತ್ತಿತ್ತು ಎಂದು ಶಶಿಧರ ಹೆಗ್ಡೆ ಪ್ರತಿಕ್ರಿಯಿಸಿದರು. ಈ ನಡುವೆ ಕೆಲ ಹೊತ್ತು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಇ ಖಾತಾ ಸಮಸ್ಯೆ 15 ದಿನಗಳಲ್ಲಿ ಇತ್ಯರ್ಥ
ಪ್ರತಿಪಕ್ಷದ ಸದಸ್ಯರಾದ ಅಬ್ದುಲ್ ರವೂಫ್‌ರವರು ಇ ಖಾತಾ ಸಮಸ್ಯೆಯಿಂದಾಗಿ ಜನ ಸಾಮಾನ್ಯರು ಸದಸ್ಯರನ್ನು ಪ್ರಶ್ನಿಸುತ್ತಿದ್ದಾರೆ ಎಂದು ವಿಷಯ ಪ್ರಸ್ತಾಪಿಸಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ ವಿವಿಧ ಸೇವಾ ಸೌಲಭ್ಯಗಳನ್ನು ಮನಪಾದಿಂದ ಸುಧಾರಣೆ ಮಾಡಲಾಗಿದ್ದು, ಇದೀಗ ಯಾವುದೇ ಉದ್ದಿಮೆದಾರರಿಂದಲೂ ಪರವಾನಿಗೆ ನವೀಕರಣ ಆಗಿಲ್ಲ ಎಂಬ ದೂರು ಬರುತ್ತಿಲ್ಲ. ಇ ಖಾತಾಕ್ಕೆ ಸಂಬಂಧಿಸಿ ಕಳೆದ 20 ದಿನಗಳಿಂದ ಸರ್ವರ್ ಸಮಸ್ಯೆಯಿಂದ ತೊಂದರೆ ಆಗಿದೆ. ರಾಜ್ಯ ವ್ಯಾಪ್ತಿಯಲ್ಲಿ ಸಮಗ್ರ ಬದಲಾವಣೆ ಆಗಬೇಕಾಗಿದೆ. 10 ದಿನಗಳಲ್ಲಿ ಹೊಸ ಸಾಫ್ಟ್‌ವೇರ್‌ನೊಂದಿಗೆ ನಗರದಲ್ಲಿ ಪೈಲಟ್ ಯೋಜನೆಯಾಗಿ ಇ ಖಾತಾ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಉಪ ಮೇಯರ್ ಸುಮಂಗಲ ರಾವ್ ಉಪಸ್ಥಿತರಿದ್ದರು.
ಎನ್‌ಎಚ್‌ಎಐ, ಮೆಸ್ಕಾಂ ವಿರುದ್ಧ ದೂರುಗಳ ಮಹಾಪೂರ
ಕಣ್ಣೂರು ವಾರ್ಡ್‌ನಲ್ಲಿ ಈ ಬಾರಿಯ ಮಳೆಯಿಂದಾಗಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದರೆ, 5 ಮನೆಗಳು ಸಂಪೂರ್ಣವಾಗಿ ಮುಳುಗಿ ಮನೆಯ ಅಪಾರ ಸಾಮಗ್ರಿಗಳಿಗೆ ಹಾನಿಯಾಗಿವೆ ಎಂದು ಸ್ಥಳೀಯ ಸದಸ್ಯೆ ಅಳಲು ತೋಡಿಕೊಂಡರು. ಸುಧೀರ್ ಶೆಟ್ಟಿಯವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಅವ್ಯವಸ್ಥೆಯಿಂದಾಗಿ ಸಮಸ್ಯೆ ಆಗುತ್ತಿದೆ. ಎನ್‌ಐಟಿಕೆ ತಜ್ಞರ ಸಮಕ್ಷಮದಲ್ಲಿ ಸಮಾಲೋಚಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದರು.
ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಪಂಪ್‌ವೆಲ್, ಎಕ್ಕೂರು ರಾಜಕಾಲುವೆಯ ನಡುವೆ ಆಗಿರುವ ತೊಂದರೆಯಿಂದ ಈ ಬಾರಿ ಮಳೆಗೆ ಎಕ್ಕೂರಿನ 35ಕ್ಕೂ ಅಧಿಕ ಮನೆಗಳಿಗೆ ನೀರು ತುಂಬಿ ಮನೆಯ ಇಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ. ಗೋರಿಗುಡ್ಡ ಬಳಿ ನೀರು ಹರಿದು ಹೋಗುವ ಒಳಚರಂಡಿ ಕಾಮಗಾರಿ ಅಪೂರ್ಣವಾಗಿದೆ. ಇದರಿಂದ ಪಂಪ್‌ವೆಲ್ ಹಾಗೂ ಇತರ ಕಡೆಗಳಲ್ಲೂ ಕೃತಕ ನೆರೆಯಾಗುತ್ತಿದೆ. ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಫ್ಲೈಓವರ್ ಮೇಲಿನ ಬೀದಿ ದೀಪಗಳು ಉರಿಯುತ್ತಿಲ್ಲ ಎಂದು ಆಕ್ಷೇಪಿಸಿದರು.
ಸದಸ್ಯರಾದ ಕಿರಣ್‌ರವರು ಕೊಟ್ಟಾರ ಚೌಕಿಯಲ್ಲಿ ಸಂಭವಿಸುವ ಕೃತಕ ನೆರೆಗೆ ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸಿದರೆ, ಮುಕ್ಕದಿಂದ ಸುರತ್ಕಲ್ ಹೈವೇ ಹೊಂಡಗಳಿಂದ ತುಂಬಿದೆ. ಎನ್‌ಎಚ್‌ಎಐ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸದಸ್ಯೆ ಶೋಭಾ ದೂರಿದರು. ಮಳೆಗಾಲದಲ್ಲಿ ಮರಗಳನ್ನು ಕಡಿದರೆ ಅದನ್ನು ಸಾಗಿಸಲಾಗುತ್ತಿಲ್ಲ. ಮೆಸ್ಕಾಂನವರು ತುರ್ತು ಸಂದರ್ಭದಲ್ಲಿ ಕರೆಯನ್ನೇ ಸ್ವೀಕರಿಸುವುದಿಲ್ಲ ಎಂದು ಸದಸ್ಯರನೇಕರು ದೂರಿಕೊಂಡರು.
ಸಭೆಯಲ್ಲಿ ಎನ್‌ಎಚ್‌ಎಐಗೆ ಸಂಬಂಧಿಸಿದ ಹಿರಿಯ ಅಧಿಕಾರಿ ಲಿಂಗೇಗೌಡ ಹಾಗೂ ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರೂ ಸಾಕಷ್ಟು ಸಮಸ್ಯೆಗಳನ್ನು ಸದಸ್ಯರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಬೇಕೆಂಬ ಆಗ್ರಹವೂ ಸಭೆಯಲ್ಲಿ ವ್ಯಕ್ತವಾಯಿತು.








