ದ.ಕ.ಜಿಲ್ಲಾದ್ಯಂತ ಭಾರೀ ಮಳೆ; ಆ.8ರಿಂದ ಆರೆಂಜ್ ಅಲರ್ಟ್: ಹವಾಮಾನ ಇಲಾಖೆ

ಮಂಗಳೂರು, ಆ.6: ದ.ಕ.ಜಿಲ್ಲೆಯಲ್ಲಿ ಶನಿವಾರ ಭಾರೀ ಮಳೆಯಾಗಿದೆ. ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮೋಡ ಕವಿದ ಮಂಜಿನ ವಾತಾವರಣದ ಮಧ್ಯೆಯೇ ನಿರಂತರ ಮಳೆ ಸುರಿದಿದೆ. ಮಳೆಯಿಂದ ಜನಜೀವನ ಭಾಗಶಃ ಅಸ್ತವ್ಯಸ್ಥಗೊಂಡಿತ್ತು.
ರವಿವಾರವೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆ.8ರಿಂದ 11ರವರೆಗೆ ಹವಾಮಾನ ಇಲಾಖೆಯು ಆರೇಂಜ್ ಅಲರ್ಟ್ ಘೋಷಿಸಿದೆ.
ಶನಿವಾರ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇನ್ನೂ ಕೆಲವು ದಿನ ಈ ವಾತಾವರಣ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
8 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಶನಿವಾರ 8 ಮನೆಗಳಿಗೆ ಭಾಗಶಃ ಹಾನಿಗೀಡಾಗಿದೆ. ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ 47 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸೇರಿಸಲಾಗಿದೆ. ಶನಿವಾರ 16 ವಿದ್ಯುತ್ ಕಂಬಗಳು, 3 ಟ್ರಾನ್ಸ್ ಫಾರ್ಮರ್ ಹಾನಿಗೀಡಾಗಿವೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
ಸಮುದ್ರವೂ ಪ್ರಕ್ಷುಬ್ಧವಾಗಿದ್ದು, ಬಿರುಗಾಳಿ ಬೀಸುತ್ತಿದೆ. ಹಾಗಾಗಿ ಸದ್ಯ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಮಳೆ ವಿವರ: ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನವರೆಗೆ ಬೆಳ್ತಂಗಡಿಯಲ್ಲಿ 95.4 ಮಿ.ಮೀ., ಬಂಟ್ವಾಳ 71.4 ಮಿ.ಮೀ., ಮಂಗಳೂರು 77.9 ಮಿ.ಮೀ., ಪುತ್ತೂರು 76.1 ಮಿ.ಮೀ., ಸುಳ್ಯ 78.2 ಮಿ.ಮೀ., ಮೂಡುಬಿದಿರೆ 125.1 ಮಿ.ಮೀ., ಕಡಬದಲ್ಲಿ 72.5 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಶನಿವಾರ ಸರಾಸರಿ 84 ಮಿ.ಮೀ. ಮಳೆ ದಾಖಲಾಗಿದೆ.