ಹದಗೆಟ್ಟ ರಸ್ತೆ: ಮಂಗಳೂರು ಮಹಾನಗರ ರಿಕ್ಷಾ ಚಾಲಕರ ಸಂಘ ಆಕ್ರೋಶ

ಮಂಗಳೂರು: ನಗರದಲ್ಲಿ ’ನೊ ಪಾರ್ಕಿಂಗ್’, ’ನೊ ಎಂಟ್ರಿ, ’ಯು ಟರ್ನ್’ ನಾಮಫಲಕಗಳನ್ನು ಕಿತ್ತು ಹಾಕಿದ್ದಲ್ಲದೆ ರಸ್ತೆಗಳಲ್ಲಿ ಹೊಂಡಗಳನ್ನು ತುಂಬಿಸದೆ ತೊಂದರೆಯುಂಟಾಗುವ ಬಗ್ಗೆ ಮಂಗಳೂರು ಮಹಾನಗರ ರಿಕ್ಷಾ ಚಾಲಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಸಂಘದ ಅಧ್ಯಕ್ಷ ಐವನ್ ಡಿಸೋಜರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದ ರಿಕ್ಷಾ ಚಾಲಕರು ನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಪದೇಪದೇ ಅಗೆದು ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಈ ಹೊಂಡಗಳಿಗೆ ಯಾವುದೇ ಮುಂಜಾಗರೂಕತೆ ಕ್ರಮ ಕೈಗೊಳ್ಳದೆ, ಒಳ ರಸ್ತೆಗಳಲ್ಲಿ ಹೊಂಡಗಳನ್ನು ಮುಚ್ಚದೆ ಬಿಡುವುದರಿಂದ ಅವುಗಳಲ್ಲಿ ನೀರು ತುಂಬಿ, ಅನೇಕ ರಿಕ್ಷಾಗಳು, ದ್ವಿಚಕ್ರ ವಾಹನಗಳು ಬಿದ್ದು, ಅನೇಕರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸತತವಾಗಿ ಸುರಿಯುವ ಮಳೆಯಿಂದ ಮತ್ತು ರಸ್ತೆ ಅಗೆಯುವುದು ನಿರಂತರಗಾಗಿ ನಡೆಯುವುದರಿಂದ ರಿಕ್ಷಾ ಚಾಲಕರು, ದ್ವಿಚಕ್ರ ವಾಹನ ಚಾಲಕರು ಚಲಿಸಲು ಅಸಾಧ್ಯವಾದ ಪರಿಸ್ಥಿತಿಯುಂಟಾಗಿರುವುದರಿಂದ ಈ ಬಗೆ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ, ರಸ್ತೆಗಳಲ್ಲಿ ಹೊಂಡಗಳನ್ನು ಮಾಡಿದ ಪ್ರದೇಶಗಳಿಗೆ ಭೇಟಿ ನೀಡಿ, ಪ್ರತಿಭಟನೆ ಮಾಡಲು ಮಂಗಳೂರು ಮಹಾನಗರ ಆಟೋ ರಿಕ್ಷಾ ಚಾಲಕರ ಸಂಘ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಐವನ್ ಡಿಸೋಜ ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದ್ದು, ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕರ ಮತ್ತು ವಾಹನ ಚಾಲಕರ ಬೇಡಿಕೆಯನ್ನು ನಿರ್ಲಕ್ಷಿಸುವುದರಿಂದ, ಹೋರಾಟವೇ ಅಂತಿಮವಾಗ ಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವಸಂತ್ ಶೆಟ್ಟಿ, ಗಣೇಶ್ ಉಳ್ಳಾಲ್, ವಿಲ್ಫ್ರೆಡ್ ಫೆರ್ನಾಂಡಿಸ್, ಅನಿಲ್ ಲೋಬೊ, ಲೂವಿಸ್ ಡಿಸೋಜ, ರಾಜೇಶ್ ಪಿ., ಆಂಟೊನಿ ಡಿಸೋಜ, ಕ್ಲಿಫರ್ಡ್ ಡಿಸೋಜ, ಮೋಹನ್ ಬಿಲಾಲ್, ಉಮೇಶ್, ಶೇಖರ್ ದೇರಳಕಟ್ಟೆ ಉಪಸ್ಥಿತರಿದ್ದರು.







