ಪ್ರವೀಣ್ ಹತ್ಯೆ; ಒಂದೆರಡು ದಿನಗಳಲ್ಲಿ ಪ್ರಮುಖ ಹಂತಕರ ಬಂಧನ: ಸಚಿವ ಸುನಿಲ್ ಕುಮಾರ್ ವಿಶ್ವಾಸ

ಉಡುಪಿ : ಬಿಜೆಪಿ ಯುವ ನಾಯಕ ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳನ್ನು ಒಂದೆರಡು ದಿನಗಳಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು. ಪ್ರವೀಣ್ ಹಂತಕರು ಕೇರಳದವರಲ್ಲ, ಸ್ಥಳೀಯರು ಎಂದು ಗೃಹ ಸಚಿವರು ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಪ್ರಕರಣದ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ. ಈಗಾಗಲೇ 2-3ರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳನ್ನು ಒಂದೆರಡು ದಿನಗಳಲ್ಲಿ ಬಂಧಿಸುವ ವಿಶ್ವಾಸವಿದೆ ಎಂದರು.
ಬಲಾತ್ಕಾರದ ಆಲಿಂಗನ: ದಾವಣಗೆರೆಯ ಸಮಾವೇಶದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಪರಸ್ಪರ ಒಪ್ಪಿಗೆಯಿಂದಾದ ಸಹಜ ಆಲಿಂಗನವಲ್ಲ. ಅದು ಬಲಾತ್ಕಾರದ ಆಲಿಂಗನ. ಹೀಗಾಗಿ ಅವರೊಳಗೆ ಯಾವಾಗ ಡೈವೋರ್ಸ್ ಆಗುತ್ತೋ ಗೊತ್ತಿಲ್ಲ ಎಂದು ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಆಲಿಂಗನ ಸಹಜವಾಗಿರಬೇಕು. ಪರಸ್ಪರ ಒಪ್ಪಿಗೆಯಿಂದ ಕೂಡಿರಬೇಕು. ಆದರೆ ಅವರಿಬ್ಬರದ್ದು ಯಾರದೋ ಬಲಾತ್ಕಾರದಲ್ಲಿ ಮಾಡಿರುವಂತಹ ಅಲಿಂಗನ. ಹೀಗಾಗಿ ಯಾವಾಗ ಡೈವರ್ಸ್ ಆಗುತ್ತೋ ಗೊತ್ತಿಲ್ಲ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಬಿಬಿಎಂಪಿ ಕ್ಷೇತ್ರ ವಿಂಗಡಣೆಯನ್ನು ಪಾರದರ್ಶಕವಾಗಿ ಮಾಡಿದ್ದೇವೆ. ಝಮೀರ್ ಅವರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ನಮಗೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಈ ಹಿಂದೆ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎಂಬುದು ನಮಗೆ ತಿಳಿದಿದೆ ಎಂದರು.
ಇತ್ತೀಚಿನ ಭಾರೀ ಮಳೆ ಹಾಗೂ ಪ್ರವಾಹದಿಂದ ಶಿರೂರು ಭಾಗದ ಮೀನುಗಾರರ ನಾಡದೋಣಿಗಳಿಗಾದ ಅಪಾರ ಹಾನಿಯ ಕುರಿತು ಪರಿಶೀಲಿಸಲು ಸಚಿವರು ಆಗಮಿಸದ ಬಗ್ಗೆ ಉಂಟಾಗಿರುವ ಅಸಮಾಧಾನ ಕುರಿತು ಪ್ರಶ್ನಿಸಿದಾಗ, ಮುಖ್ಯಮಂತ್ರಿಗಳು ಇಂದು ನೆರೆ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ್ದಾರೆ. ಇದರಲ್ಲಿ ಪರಿಹಾರದ ಬಗ್ಗೆ ಸೂಚನೆ ನೀಡಲಿದ್ದಾರೆ ಎಂದರು.
ಕರಾವಳಿಯ ಎರಡು ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್‌ನ್ನು ನೀಡುವಂತೆ ಈಗಾಗಲೇ ನಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಆ.15ರ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಅವರಿಗೆ ಮನದಟ್ಟು ಮಾಡಲಿದ್ದೇವೆ ಎಂದು ಸುನಿಲ್ ಹೇಳಿದರು.
ಹರ್‌ಘರ್ ತಿರಂಗಾದಡಿ ಉಡುಪಿ ಜಿಲ್ಲೆಯಲ್ಲಿ 4 ಲಕ್ಷ ಮತ್ತು ದ.ಕದಲ್ಲಿ 6 ಲಕ್ಷ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲಾಗುವುದು ಎಂದ ಸಚಿವರು, ಆಗಸ್ಟ್ 13ರಿಂದ ರಾಜ್ಯದ ಎಲ್ಲಾ 5 ರಂಗಾಯಣಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ನಾಟಕ ಪ್ರದರ್ಶನ ಮಾಡಲಿದ್ದೇವೆ. ರಂಗಾಯಣ ಕರ್ನಾಟಕದಾದ್ಯಂತ ಯಾತ್ರೆ ಕೈಗೊಂಡು ಶಾಲಾ-ಕಾಲೇಜುಗಳಲ್ಲಿ ನಾಟಕವನ್ನು ಪ್ರದರ್ಶಿಸಲಿದೆ ಎಂದರು.
ರಂಗಾಯಣಗಳಿಗೆ ಅನುದಾನ ಬಿಡುಗಡೆಯಾಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುನಿಲ್, ಕೋವಿಡ್ ಸಂದರ್ಭದಲ್ಲಿ ರಂಗಾಯಣಗಳಿಗೆ ಅನುದಾನ ಕೊರತೆಯಾಗಿತ್ತು. ಈ ಬಾರಿ ಹೆಚ್ಚಿನ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಕೋರಲಾಗಿದೆ. ಹೆಚ್ಚಿನ ಅನುದಾನ ನೀಡಲು ಆರ್ಥಿಕ ಇಲಾಖೆ ಒಪ್ಪಿಕೊಂಡಿದೆ ಎಂದು ಸಚಿವರು ತಿಳಿಸಿದರು.







