ಸತತ ಮಳೆ; ಕುಂದಾಪುರದಲ್ಲಿ ಎರಡು ಮನೆಗಳಿಗೆ ಹಾನಿ

ಉಡುಪಿ, ಆ.6: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕುಂದಾಪುರ ತಾಲೂಕಿನಲ್ಲಿ ಒಂದು ಮನೆ ಹಾಗೂ ಒಂದು ಜಾನುವಾರು ಕೊಟ್ಟಿಗೆಗೆ ಭಾಗಶ: ಹಾನಿ ಸಂಭವಿಸಿದೆ.
ತಾಲೂಕಿನ ಸಿದ್ಧಾಪುರ ಗ್ರಾಮದ ಗೋವಿಂದ ನಾಯಕ್ ಎಂಬವರ ಜಾನುವಾರು ಕೊಟ್ಟಿಗೆ ನಿನೆಯ ಸತತ ಮಳೆಯಿಂದ ಹಾನಿಗೊಂಡಿದ್ದರೆ, ಹಕ್ಲಾಡಿ ಗ್ರಾಮದ ಕಾಳಯ್ಯ ಆಚಾರಿ ಎಂಬವರ ಮನೆಯೂ ಮಳೆಯಿಂದ ಬಾಗಶ: ಹಾನಿಗೊಳಗಾಗಿದೆ. ಇದರಿಂದ ಒಟ್ಟು ಸುಮಾರು ೭೫ ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
116ಮಿ.ಮೀ ಮಳೆ: ಶನಿವಾರ ಬೆಳಗ್ಗೆ ೮:೩೦ಕ್ಕೆ ಮುಕ್ತಾಯಗೊಂಡಂತೆ ಹಿಂದಿನ ೨೪ ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ ೧೧೬.೦ ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ ೧೮೧.೨ಮಿ.ಮೀ.ಮಳೆಯಾದರೆ, ಉಡುಪಿ ಯಲ್ಲಿ ೧೨೨.೬ಮಿ.ಮೀ., ಕಾರ್ಕಳದಲ್ಲಿ ೧೧೭ಮಿ.ಮೀ., ಬ್ರಹ್ಮಾವರದಲ್ಲಿ ೧೧೬.೬ಮಿ.ಮೀ., ಬೈಂದೂರಿನಲ್ಲಿ ೧೦೭.೧ಮಿ.ಮೀ., ಕಾಪುವಿನಲ್ಲಿ ೯೪.೮ ಹಾಗೂ ಕುಂದಾಪುರದಲ್ಲಿ ೯೦.೬ಮಿ.ಮೀ. ಮಳೆಯಾದ ಬಗ್ಗೆ ವರದಿ ಬಂದಿದೆ.
ರವಿವಾರವೂ ರೆಡ್ ಅಲರ್ಟ್: ಶನಿವಾರ ಸಹ ಜಿಲ್ಲೆಯಲ್ಲಿ ದಿನವಿಡೀ ಸಾಧಾರಣದಿಂದ ಭಾರೀ ಮಳೆ ಬಿದ್ದಿದೆ. ಆದರೆ ಜಿಲ್ಲೆಯಲ್ಲಿ ಎಲ್ಲೂ ಮಳೆಯಿಂದ ಗಂಭೀರ ಸಮಸ್ಯೆ ಎದುರಾಗಿಲ್ಲ. ಆ.೭ರ ರವಿವಾರದಂದೂ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ೨೦೪.೫ಮಿ.ಮೀ.ಗಿಂತ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ.
ಇದರೊಂದಿಗೆ ಗಂಟೆಗೆ ೪೫ರಿಂದ ೫೫ಕಿ.ಮೀ. ವೇಗದ ಗಾಳಿ ಬೀಸುವ ಹಾಗೂ ನಾಳೆ ಮಧ್ಯರಾತ್ರಿ ೧೧:೩೦ರವರೆಗೆ ಅರಬಿಸಮುದ್ರದಲ್ಲಿ ಭಾರೀ ತೆರೆ ಏಳುವ ಸಾಧ್ಯತೆಯ ಬಗ್ಗೆಯೂ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಮೀನುಗಾರರು ಇನ್ನೆರಡು ದಿನವೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ.







