ತ್ಯಾಜ್ಯಗಳ ಮರು ಬಳಕೆಯಿಂದ ಆರೋಗ್ಯಕರ ವಾತಾವರಣ: ಶ್ರೀನಿವಾಸ ರಾವ್

ಉಡುಪಿ : ಘನ ಮತ್ತು ದ್ರವ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಯಿಂದ ಅವನ್ನು ಉತ್ತಮ ಸಂಪನ್ಮೂಲವನ್ನಾಗಿ ಸಬಹುದು. ತ್ಯಾಜ್ಯದ ಮರುಬಳಕೆ ಯಿಂದ ಸಂಪನ್ಮೂಲದ ಅಭಾವ ತಪ್ಪಿಸುವುದರೊಂದಿಗೆ ಆರೋಗ್ಯಕರ ವಾತಾವರಣ ನಿರ್ಮಿಸಬಹುದು ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ವಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ, ಜಿಪಂನ ಸ್ವಚ್ಛ ಭಾರತ್ ಮಿಷನ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಇವುಗಳ ಸಂಯುಕ್ತ ಆಶ್ರಯ ದಲ್ಲಿ ನಡೆದ, ಋತುಚಕ್ರ ನೈರ್ಮಲ್ಯ ಹಾಗೂ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ ಎಂಬ ವಿಷಯದ ಕುರಿತು ವಲಯ ಮಟ್ಟದ, ಪ್ರೌಢಶಾಲಾ ಮಹಿಳಾ ಶಿಕ್ಷಕರಿಗೆ ಜಾಗೃತಿ ಮೂಡಿಸುವ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡು ತಿದ್ದರು.
ಶಾಲೆಗಳಲ್ಲಿ ಇಕೋ ಕ್ಲಬ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದಲ್ಲಿ ಮುಂದಿನ ಪೀಳಿಗೆಯು ಮಾಲಿನ್ಯ ರಹಿತ ಆರೋಗ್ಯಯುತ ಜೀವನ ನಡೆಸಬಹುದು. ವೈಜ್ಞಾನಿಕವಾಗಿ ಶೌಚಾಲಯಗಳ ನಿರ್ಮಾಣ, ದ್ರವ ತ್ಯಾಜ್ಯ ವಿಲೇವಾರಿಗೆ ಸಾಂಪ್ರದಾಯಿಕ ವಿಧಾನದಲ್ಲಿ ಸಸ್ಯಗಳನ್ನು ಬೆಳೆಸಿ ಕೈತೋಟ ಮಾಡುವ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಿದ ಅವರು, ಶಾಲೆಗಳಲ್ಲಿ ಹೆಣ್ಣು ಮಕ್ಕಳು ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಇನ್ಸಿನರೇಟರ್ ಬಳಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ತಿಳಿಸಿದರು.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮಾತನಾಡಿ, ತ್ಯಾಜ್ಯ ವಿಲೇವಾರಿ ಇಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದ್ದು, ಸೂಕ್ತ ರೀತಿಯಲ್ಲಿ ಇದನ್ನು ವಿಲೇವಾರಿ ಮಾಡಬೇಕು. ಹೆಣ್ಣು ಮಕ್ಕಳ ಋತು ಚಕ್ರದ ಬಗ್ಗೆ ಇರುವ ಮೂಡನಂಬಿಕೆಗಳನ್ನು ಹೋಗಲಾಡಿಸಬೇಕು ಎಂದರು.
ಮಣಿಪಾಲ ಕೆಎಂಸಿಯ ಸ್ತ್ರೀರೋಗ ತಜ್ಞೆ ಡಾ.ರಜನಿ ಉಪಾಧ್ಯಾಯ ಹೆಣ್ಣು ಮಕ್ಕಳಲ್ಲಿ ಋತುಚಕ್ರ ಉಂಟಾಗುವ ಸಂದರ್ಭದಲ್ಲಿ ಕಂಡುಬರುವ ದೈಹಿಕ ಹಾಗೂ ಮಾನಸಿಕ ಬದಲಾವಣೆ, ನೈರ್ಮಲ್ಯ, ಸ್ಯಾನಿಟರಿ ಪ್ಯಾಡ್ ಮತ್ತು ಕಪ್‌ಗಳ ಬಳಕೆ, ಪ್ಯಾಡ್‌ಗಳ ಸೂಕ್ತ ವಿಲೇವಾರಿ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಉಡುಪಿ ವಲಯದ ಶಿಕ್ಷಕರು ಭಾಗವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಾ ಬಿ ಸ್ವಾಗತಿಸಿ, ವಿಜ್ಞಾನ ಶಿಕ್ಷಕಿ ಉಮಾರಾವ್ ವಂದಿಸಿದರು.







