ದ.ಕ.ಜಿಲ್ಲೆಯ ವೆಂಟೆಡ್ ಡ್ಯಾಂಗಳಲ್ಲಿನ ದಿಮ್ಮಿಗಳ ತೆರವಿಗೆ ಸಿಎಂ ಸೂಚನೆ

ಮಂಗಳೂರು, ಆ.6: ದ.ಕ. ಜಿಲ್ಲೆಯಲ್ಲಿರುವ ವೆಂಟೆಡ್ ಡ್ಯಾಂಗಳಲ್ಲಿ ಸೇರಿರುವ ಮರದ ದಿಮ್ಮಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಮಳೆಯಿಂದ ಹಾನಿಗೊಳಗಾದ ದ.ಕ. ಸಹಿತ ರಾಜ್ಯದ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಳೆಯಿಂದಾದ ಹಾನಿ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳು ಕುರಿತು ಶನಿವಾರ ಬೆಂಗಳೂರಿನಿಂದ ವೀಡಿಯೋ ಕಾನ್ಫೆರೆನ್ಸ್ ಮೂಲಕ ಅವರು ಮಾತನಾಡಿದರು.
ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಅರಣ್ಯ ಇಲಾಖೆಯಿಂದಲೂ ಸೂಕ್ತ ಕ್ರಮವಹಿಸಲು ತಿಳಿಸಲಾಗಿತ್ತು. ಮಳೆ ಹಾಗೂ ಪ್ರವಾಹದಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದೆ, ಕಳೆದ ೪೮ ಗಂಟೆಗಳಲ್ಲಿ ಹೆಚ್ಚಿನ ಅವಘಡಗಳು ಸಂಭವಿಸಿಲ್ಲ, 11 ಮನೆಗಳು ಭಾಗಶಃ ಹಾಗೂ 5 ಮನೆಗಳು ಸಂಪೂರ್ಣ ಹಾನಿಯಾಗಿವೆ. ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಗುಡ್ಡಗಳ ಕುಸಿತ ಹೆಚ್ಚಾಗುತ್ತಿವೆ. ಮುನ್ನಚ್ಚರಿಕಾ ಕ್ರಮವಾಗಿ 49 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 60 ಜನರಿಗೆ ಡ್ರೈ ರೇಷನ್ ಕಿಟ್‌ಗಳನ್ನು ವಿತರಿಸಲಾಗಿದೆ,. ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳಲ್ಲಿ ತಲಾ 10 ಸಾವಿರ ರೂ.ಗಳ ಮತ್ತು ಮನೆ ಹಾನಿಯಾದ ಪ್ರಕರಣಗಳಲ್ಲಿ 48 ಗಂಟೆಗಳಲ್ಲಿ 95,000ರೂ.ಗಳ ಪರಿಹಾರ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿರುವ ಎಲ್ಲಾ ವೆಂಟೆಡ್ ಡ್ಯಾಂಗಳಲ್ಲಿ ಅರಣ್ಯ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಮರದ ದಿಮ್ಮಿಗಳನ್ನು ತೆರವುಗೊಳಿಸಲಾಗಿದೆ ಹಾಗೂ ಅವುಗಳನ್ನು ಅರಣ್ಯ ಇಲಾಖೆಯ ಟಿಂಬರ್ ಯಾರ್ಡ್ ನಲ್ಲಿರಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ನಾರಾಯಣಗೌಡ, ಗೋಪಾಲಯ್ಯ, ಬಿ.ಎ. ಬಸವರಾಜ, ಆರಗ ಜ್ಞಾನೇಂದ್ರ, ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯಿಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಪಂ ಸಿಇಒ ಡಾ. ಕುಮಾರ್, ಡಿಸಿಪಿ ಅನ್ಷು ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮತ್ತಿತರರು ಪಾಲ್ಗೊಂಡಿದ್ದರು.