ಪಡುಬಿದ್ರೆ ಜಂಕ್ಷನ್‌ನಲ್ಲಿ ದಿನನಿತ್ಯ ಟ್ರಾಫಿಕ್ ಸಮಸ್ಯೆ; ವಾಹನ ಸಂಚಾರ, ಜನಸಾಮಾನ್ಯರು ನಡೆದಾಡಲು ದುಸ್ತರ

ಪಡುಬಿದ್ರೆ: ಬೆಳೆಯುತ್ತಿರುವ ಪಡುಬಿದ್ರಿ ಪೇಟೆಯಲ್ಲಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಜನಸಾಮಾನ್ಯರು ನಡೆದಾಡುವುದೇ ಅಪಾಯಕಾರಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ಮತ್ತು ರಾಜ್ಯ ಹೆದ್ದಾರಿ 1ನ್ನು ಸಂಪರ್ಕಿಸುವ ಪಡುಬಿದ್ರಿ ಜಂಕ್ಷನ್ ಕಾರ್ಕಳ-ಮಂಗಳೂರು-ಉಡುಪಿಯನ್ನು ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನಗಳ ಭರಾಟೆ, ಈ ಮಧ್ಯೆ ಮೂರೂ ಕಡೆಗಳಲ್ಲಿ ಬರುವ ವಾಹನ ಸಂಚಾರ. ಮೂರೂ ಕಡೆಗಳಿಂದ ಬರುವ ವಾಹನಗಳಿಂದಾಗಿ ಜನರು ರಸ್ತೆ ದಾಟಲು ಹಲವು ಹೊತ್ತು ಕಾಯಬೆಕಾದ ಪರಿಸ್ಥಿತಿ ಇದೆ. ವಯೋವೃದ್ಧರು, ಮಹಿಳೆಯರು, ಮಕ್ಕಳು ರಸ್ತೆ ದಾಟುವುದು ಒಂದು ಸಾಹಸವೇ ಆಗಿದೆ. ಇದರಿಂದ ಈ ಪ್ರದೇಶದಲ್ಲಿ ಅಪಘಾತ ವಲಯವಾಗಿ ಮಾರ್ಪಟ್ಟಿದೆ.
ಪಡುಬಿದ್ರಿ ಕಲ್ಸಂಕದಿಂದ ಬೀಡು ಬೈಪಾಸ್ ವರೆಗಿನ ಸುಮಾರು ಒಂದೂವರೆ ಕಿ.ಮೀ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಅಪಘಾಯಲ್ಲಿ ಕಳೆದ ಒಂದು ವರ್ಷದಿಂದ ನಡೆದ ಹಲವು ಅಪಘಾತಗಳೇ ಇದಕ್ಕೆ ಸಾಕ್ಷಿ. ಪ್ರತಿನಿತ್ಯ ಒಂದಿಲ್ಲೊಂದು ಸಣ್ಣ ಪುಟ್ಟ ಅಪಘಾತಗಳು ಮಾಮೂಲಿಯಾಗುತ್ತಿವೆ. ಹೆಚ್ಚಿನ ಅಪಘಾತಗಳಲ್ಲಿ ಹಿರಿಯ ಜೀವಗಳೇ ಬಲಿಯಾಗುತ್ತಿದ್ದಾರೆ. ಈ ಅಪಘಾತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದಲ್ಲದೆ ಇನ್ನು ಕೆಲವರು ಹಾಗೂ ಗಂಭಿರ ಸ್ವರೂಪದ ಗಾಯಾಳುಗಳಾಗಿದ್ದು, ಪಾದಚಾರಿಗಳು ಜೀವ ತೆತ್ತಿದ್ದಾರೆ.
ಅಪಾಯಕಾರಿ ಜಂಕ್ಷನ್: ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಸಂಧಿಸುವ ಜಂಕ್ಷನ್ ತೀರಾ ಅಪಾಯಕಾರಿಯಾಗಿದೆ. ಪಡುಬಿದ್ರಿ ಪ್ರದೇಶದಲ್ಲಿ ತಲೆ ಎತ್ತಿರುವ ಬೃಹತ್ ಉದ್ದಿಮೆಗಳಿಗೆ ಬರುವ ಘನ ವಾಹನಗಳ ಸಂಚಾರಕ್ಕೆ ಪ್ರಮುಖ ರಸ್ತೆಯಾಗಿರುವ ಈ ಭಾಗದ ಜಂಕ್ಷನ್ ಕಾರ್ಕಳ-ಕುದುರೆಮುಖ ರಾಜ್ಯ ಹೆದ್ದಾರಿಯನ್ನೂ ಸಂಪರ್ಕಿಸುತ್ತಿದೆ. ಈ ಜಂಕ್ಷನ್‍ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಕಾರ್ಕಳ ಹೆದ್ದಾರಿಯಲ್ಲಿ ಕೈಗಾರಿಕ ಘಟಕಗಳಿಗೆ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳ ನಿಲುಗಡೆಗೆ ಹಿಂದೆ ತಾಲೂಕು ಆಡಳಿತದಿಂದ ನಿಷೇಧಿಸಲಾಗಿದ್ದರೂ, ಮತ್ತೆ ಹೆದ್ದಾರಿಯಲ್ಲಿಯೇ ತಾಸುಗಟ್ಟಲೆ ಮಾಡಲಾಗುತ್ತಿದೆ. ದೂರದೂರಿಗೆ ಕೆಲಸಕ್ಕೆ ಹೋಗುವ ಮಂದಿ ಹೆದ್ದಾರಿಯಲ್ಲಿಯೇ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡಿ ತೆರಳುತ್ತಿರುವುದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇಲ್ಲಿ ಪೊಲೀಸರೂ ಸುಗಮ ಸಂಚಾರಕ್ಕೆ ಹರಸಾಹಸ ಪಡಬೇಕಾಗುತ್ತದೆ. ಇದೊಂದು ಅಪಘಾತ ವಲಯವಾಗಿದ್ದು, ಈ ಜಂಕ್ಷನ್‍ಗೆ ಸಿಗ್ನಲ್ ವ್ಯವಸ್ಥೆಯಾಗಬೇಕಿದ್ದು, ಪೂರ್ಣಕಾಲಿಕ ಪೊಲೀಸ್ ವ್ಯವಸ್ಥೆ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹ.
ನಿರ್ಮಾಣವಾಗಬೇಕಿದೆ ಪಾದಚಾರಿ ಮೇಲ್ಸೇತುವೆ: ದಿನದಿಂದ ದಿನಕ್ಕೆ ಸಂಚಾರ ತೊಡಕಾಗುತ್ತಿರುವ ಪಡುಬಿದ್ರಿ ಪೇಟೆಯಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಪಾದಚಾರಿ ಮೇಲ್ಸೇತುವೆ ಅಥವಾ ಫ್ಲೈಓವರ್ ರಸ್ತೆ ನಿರ್ಮಾಣವಾದಲ್ಲಿ ತಕ್ಕಮಟ್ಟಿನಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಬಹುದು. ಬೀಡು ಬೈಪಾಸ್ ಬಳಿ ಸೂಕ್ತ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಬೇಡಿಕೆಯಿದ್ದರೂ, ಅದು ಇನ್ನೂ ಕೈಗೂಡಿಲ್ಲ. ಪರಿಣಾಮ ಹೆಜಮಾಡಿ ಒಳಭಾಗಗಕ್ಕೆ ಸಂಚರಿಸುವ ವಾಹನಗಳು ಏಕಮುಖವಾಗಿ ಸಂಚರಿಸಿ ಅಪಾಯಕ್ಕೆ ಕಾರಣವಾಗುತ್ತಿದೆ.
ಬಸ್ಸು ನಿಲ್ದಾಣ ಇಲ್ಲ ಎಂಬ ಕೂಗಿದೆ ಮಣಿದು ಪಡುಬಿದ್ರಿ ಗ್ರಾಮ ಪಂಚಾಯಿತಿ ಮಂಗಳೂರು, ಕಾರ್ಕಳ ಹಾಗೂ ಉಡುಪಿ ಕಡೆಗೆ ತೆರಳುವವರಿಗೆ ಖಾಸಗಿ ಸಹಭಾಗಿತ್ವದಲ್ಲಿ ಬಸ್ಸು ನಿಲ್ದಾಣವನ್ನು ನಿರ್ಮಿಸಲಾಗಿದೆ. ಬಸ್ಸು ತಂಗುದಾಣ ನಿರ್ಮಾಣವಾದ ಬಳಿಕ ಸರ್ವೀಸ್ ರಸ್ತೆಯಲ್ಲೇ ಬಸ್ಸುಗಳು ಸಂಚರಿಸುತಿದ್ದು, ಸರ್ವೀಸ್ ರಸ್ತೆಯಲ್ಲಿ ವೇಗವಾಗಿ ಬರುವ ಬಸ್ಸುಗಳಿಂದಾಗಿ ಇತರೆ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗಿದೆ. ಬಸ್ಸುಗಳು ಸರ್ವೀಸ್ ರಸ್ತೆಗೆ ಪ್ರವೇಶಿಸುವಾಗ ವೇಗ ಬಸ್ಸುಗಳ ವೇಗ ಕಡಿತಗೊಳಿಸಬೇಕು ಇಲ್ಲದಿದ್ದಲ್ಲಿ ಇದು ಮತ್ತೊಂದು ಅಪಘಾತಕ್ಕೆ ಕಾರಣವಾಗಬಹುದು ಎಂಬುವುದು ಸಾರ್ವಜನಿಕರ ದೂರು.







