ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು, ಆ.6: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಎಸೆಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನವೋದಯ ಸ್ವಸಹಾಯ ಗುಂಪುಗಳ ಸದಸ್ಯರ ಹಾಗೂ ಬ್ಯಾಂಕ್ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಶನಿವಾರ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ದೇಶದ ಸಂಪತ್ತು ಆಗಿದ್ದು, ಭವಿಷ್ಯದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಸಮಾಜಮುಖಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಎಸೆಸೆಲ್ಸಿ ಮತ್ತು ಪಿಯು ಕಲಿತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ರ್ಯಾಂಕ್ ಕೂಡ ಗಳಿಸಬಹುದು. ಆದರೆ ಬದುಕಿನಲ್ಲಿ ಮಾನವೀಯತೆ, ಅಂತಃಕರಣ, ಸಮಾಜಮುಖಿ ಚಿಂತನೆಗಳನ್ನು ರೂಢಿಸಿ ಕೊಳ್ಳದಿದ್ದರೆ ಕಲಿಕೆ ಅರ್ಥಪೂರ್ಣವಾಗದು. ಸಮಾಜದ ಸಾಮರಸ್ಯಕ್ಕಾಗಿ ಸದಾ ಯೋಚನೆ ಮಾಡಬೇಕು ಎಂದು ಡಾ.ಮೋಹನ ಆಳ್ವ ಅಭಿಪ್ರಾಯಪಟ್ಟರು.
ವಿದೇಶದಲ್ಲಿ ಶಿಕ್ಷಣದಲ್ಲಿ ಬಡವ-ಶ್ರೀಮಂತ ಎಂಬ ಅಂತರ ಇಲ್ಲ, ಆದರೆ ನಮ್ಮಲ್ಲಿ ಇನ್ನೂ ಶಿಕ್ಷಣ ವಂಚಿತರಿದ್ದಾರೆ. ಪ್ರಸಕ್ತ ದೇಶದಲ್ಲಿ ೧ರಿಂದ ದ್ವಿತೀಯ ಪಿಯುವರೆಗೆ ೪೫ ಕೋಟಿ ಮಕ್ಕಳಿದ್ದಾರೆ. ಪಿಯು ಕಲಿಯುವ ಮಕ್ಕಳ ಸಂಖ್ಯೆಯೇ ೩೬ ಕೋಟಿ ಇದ್ದಾರೆ. ಸುಮಾರು ೧೧.೬೦ ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಪ್ರತಿ ಹಂತದ ವ್ಯಾಸಂಗದಲ್ಲೂ ಕಠಿಣ ಸವಾಲು, ಸ್ಪರ್ಧೆ ಇದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಾಧಕ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತೇಜನ ಹಾಗೂ ಇತರ ವಿದ್ಯಾರ್ಥಿಗಳ ಪ್ರೇರಣೆಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಅಲ್ಲದೆ ಬ್ಯಾಂಕ್ ಸಿಬ್ಬಂದಿಯ ಮಕ್ಕಳು ಕೂಡ ಉನ್ನತ ವ್ಯಾಸಂಗ ಮಾಡಬೇಕು ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.
ಪುರಸ್ಕಾರ ಪಡೆದ ವಿದ್ಯಾರ್ಥಿಗಳಾದ ಇಂದಿರಾ ಬಾಗಲಕೋಟೆ, ಶ್ರೇಯಾ ಶೆಟ್ಟಿ, ಕಲ್ಲೇಶ್ ಅನಿಸಿಕೆ ವ್ಯಕ್ತಪಡಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ, ಟಿ.ಜಿ.ರಾಜಾರಾಮ ಭಟ್, ಎಸ್.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಭಾಸ್ಕರ ಕೋಟ್ಯಾನ್, ಸಹಕಾರಿ ಸಂಘಗಳ ಉಪನಿಬಂಧಕ ಸುಧೀರ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕಿನ ಮಹಾಪ್ರಬಂಧಕ ಗೋಪಿನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು.