ಪಾಕಿಸ್ತಾನ ತ್ಯಜಿಸಿ ಭಾರತಕ್ಕೆ ಆಗಮಿಸಿದ ವೈದ್ಯಕೀಯ ಪದವೀಧರರಿಗೆ ವೈದ್ಯ ವೃತ್ತಿ ನಡೆಸಲು ಎನ್ಎಂಸಿ ಅವಕಾಶ

photo : indianexpress
ಹೊಸದಿಲ್ಲಿ, ಆ. 6: ಕಿರುಕುಳಕ್ಕೊಳಗಾಗಿ ಪಾಕಿಸ್ತಾನ ತೊರೆದು 2014 ಡಿಸೆಂಬರ್ 31ರಂದು ಅಥವಾ ಅದಕ್ಕಿಂತ ಮೊದಲು ಭಾರತಕ್ಕೆ ವಲಸೆ ಬಂದ ಅಲ್ಪಸಂಖ್ಯಾತರು ಇಲ್ಲಿ ವೈದ್ಯ ವೃತ್ತಿ ನಡೆಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಅವಕಾಶ ನೀಡಲಿದೆ.
ಆಧುನಿಕ ವೈದ್ಯ ಅಥವಾ ಅಲೋಪತಿ ವೈದ್ಯ ವೃತ್ತಿ ನಡೆಸಲು ಶಾಶ್ವತ ನೋಂದಣಿ ಪಡೆಯಲು ಭಾರತದ ಪೌರತ್ವ ಪಡೆದುಕೊಂಡ ವೈದ್ಯಕೀಯ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ಆಯೋಗ ಅಥವಾ ಸಂಸ್ಥೆ ನಡೆಸುವ ಪರೀಕ್ಷೆಯಲ್ಲಿ ಹಾಜರಾಗಲು ಪಟ್ಟಿ ಮಾಡಲಾದ ಅರ್ಜಿದಾರರಿಗೆ ಅವಕಾಶ ನೀಡಲಾಗುವುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ)ದ ಪದವಿ ವೈದ್ಯಕೀಯ ಶಿಕ್ಷಣ ಮಂಡಳಿ (ಯುಎಂಇಬಿ) ಸಾರ್ವಜನಿಕ ನೋಟಿಸಿನಲ್ಲಿ ಹೇಳಿದೆ.
ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾಗಿ ವಲಸೆ ಬಂದ ಹಾಗೂ ಭಾರತೀಯ ಪೌರತ್ವ ಪಡೆದುಕೊಂಡ ವೈದ್ಯಕೀಯ ಪದವೀಧರರು ಇಲ್ಲಿ ವೈದ್ಯ ವೃತ್ತಿ ನಡೆಸಲು ಶಾಶ್ವತ ನೋಂದಣಿ ಪಡೆಯಲು ಸಾಧ್ಯವಾಗುವಂತೆ ಪ್ರಸ್ತಾವಿತ ಪರೀಕ್ಷೆಗೆ ಮಾರ್ಗಸೂಚಿಗಳನ್ನು ರೂಪಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ತಜ್ಞರ ತಂಡವೊಂದನ್ನು ರೂಪಿಸಿತ್ತು.
ಯುಎಂಇಬಿ ಪ್ರಕಾರ ಅರ್ಜಿ ದಾರರು ಮಾನ್ಯ ವೈದ್ಯಕೀಯ ಅರ್ಹತೆ ಹೊಂದಿರಬೇಕು ಹಾಗೂ ಭಾರತಕ್ಕೆ ವಲಸೆ ಬರುವುದಕ್ಕಿಂತ ಮುನ್ನ ಪಾಕಿಸ್ತಾನದಲ್ಲಿ ವೈದ್ಯಕೀಯ ವೃತ್ತಿ ನಡೆಸಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟಂಬರ್ 5 ಎಂದು ನೋಟಿಸ್ ಹೇಳಿದೆ.