ನವೆಂಬರ್ ನಲ್ಲಿ ಅಂತರ್ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ

ಬೆಂಗಳೂರು, ಆ.6: ಅಂತರ್‍ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಹಿನ್ನಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಕಳೆದ ಜು.26 ರಿಂದ ಆ.6ರವರೆಗೆ ಜರ್ಮನಿ, ಸ್ವಿಡ್ಜರ್ ಲ್ಯಾಂಡ್ ಹಾಗೂ ಇಟಲಿ ದೇಶಗಳ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗಿನ ಅಧ್ಯಯನ ಪ್ರವಾಸ ಪೂರೈಸಿದ್ದಾರೆ.
ಅಲ್ಲದೇ ನಮ್ಮ ರಾಜ್ಯದ ರೈತರೂ ಸೇರಿದಂತೆ ದೇಶದ ಅನ್ನದಾತರು ಯಾವ ರೀತಿ ತಮ್ಮ ಕೃಷಿ ಚಟುವಟಿಕೆಗಳನ್ನು ಲಾಭಗೊಳಿಸಬಹುದೆಂಬುದನ್ನು ಈ ಅಧ್ಯಯನ ಬಿ.ಸಿ.ಪಾಟೀಲ್ ತಿಳಿದುಕೊಂಡಿದ್ದಾರೆ.
ರೈತರಿಗೆ, ರೈತೋದ್ಯಮಿಗಳಿಗೆ ಲಾಭ ತಂದುಕೊಡುವ ಹಾಗೂ ರೈತರನ್ನು ಕೃಷಿಯತ್ತ ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಮುಂಬರುವ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿರುವ ‘ಅಂತರ್ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳ’ದಲ್ಲಿ ಜಾಗತಿಕ ಕೃಷಿ ಸಂಸ್ಥೆಗಳ ಮುಖ್ಯಸ್ಥರನ್ನು ಹಾಗೂ ಜಾಗತಿಕ ಕೃಷಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿರುವ ರಫ್ತುದಾರರನ್ನು ಹಾಗೂ ಖಾಸಗಿ ಸಂಸ್ಥೆಗಳ ಮುಖ್ಯಸ್ಥರನ್ನು ಬಿ.ಸಿ.ಪಾಟೀಲ್ ಖುದ್ದು ಭೇಟಿ ನೀಡಿ ಆಹ್ವಾನಿಸಿದ್ದಾರೆ.
ಅಲ್ಲಿನ ಹಾಗೂ ನಮ್ಮ ರಾಜ್ಯದ ರೈತರ ಕೃಷಿ ಚಟುವಟಿಕೆಗಳು ಕೃಷಿ ಇಲಾಖೆಯ ಸಾಧನೆಗಳು ಹಾಗೂ ರೈತೋಪಯೋಗಿ ಯೋಜನೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸುವ ಉದ್ದೇಶವನ್ನೊಳಗೊಂಡ ಈ ಅಧ್ಯಯನ ಪ್ರವಾಸದಲ್ಲಿ ಜರ್ಮನಿ ನ್ಯೂರನ್‍ಬರ್ಗ್‍ದಲ್ಲಿ ಆಯೋಜಿಸಿದ್ದ ಅಂತರ್‍ರಾಷ್ಟ್ರೀಯ ಸಾವಯವ ಸಮ್ಮೇಳನದಲ್ಲಿ ಭಾಗವಹಿಸಿದ ಬಿ.ಸಿ.ಪಾಟೀಲ್, ವಿವಿಧ ದೇಶಗಳಿಂದ ಭಾಗವಹಿಸಿದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ, ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದರು.
ವಿಶೇಷವಾಗಿ ಶ್ರೀಲಂಕಾ ದೇಶದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಅವರೊಂದಿಗೆ ಶ್ರೀಲಂಕಾ ದೇಶದ ಸಾವಯವ ಕೃಷಿ ಅನುಷ್ಠಾನ ಹಾಗು ಸಾವಯವ ಪದಾರ್ಥಗಳ ರಫ್ತು ಸಾಮರ್ಥ್ಯ ಕುರಿತು ಚರ್ಚಿಸಿದರು. ಜಾಗತಿಕವಾಗಿ Anti Oxidant Blended Coffee ಉತ್ಪಾದಿಸುವ ಸುಪ್ರಸಿದ್ಧ ಸಂಸ್ಥೆಯ ಸಿಇಓ ಆದ ಅಸಂಕ ಡಿಸಿಲ್ವಾ ಅವರೊಂದಿಗೆ ರಾಜ್ಯದ ಸಾವಯವ ಕಾಫಿ ರಫ್ತಿನ ಅವಕಾಶಗಳ ಕುರಿತು ಅವರು ಚರ್ಚಿಸಿದರು.
ಅಧ್ಯಯನ ಪ್ರವಾಸದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್, ರಾಜ್ಯದ ಸಾವಯವ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಆನಂದ, ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಆಡಳಿತ ಮಂಡಳಿಯ ಸದಸ್ಯ ಸುರೇಶ ಮರಗದ, ರೈತ ನಿರಂಜನ ಬಾಬು ಹಾಗೂ ಸಚಿವರ ವಿಶೇಷ ಅಧಿಕಾರಿ ಮಂಜು ಎ.ಸಿ. ಇದ್ದರು.







