ಕಾಮನ್‍ವೆಲ್ತ್ ಕ್ರೀಡಾಕೂಟ: ರೋಚಕ ಜಯದೊಂದಿಗೆ ಭಾರತ ಹಾಕಿ ತಂಡ ಫೈನಲ್‍ಗೆ

ಬರ್ಮಿಂಗ್‍ಹ್ಯಾಂ: ಕಾಮನ್‍ವೆಲ್ತ್ ಕ್ರೀಡಾಕೂಟದ ಹಾಕಿ ಸ್ಪರ್ಧೆಯ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-2 ಗೋಲುಗಳ ರೋಚಕ ಜಯದೊಂದಿಗೆ ಭಾರತ ಪುರುಷರ ಹಾಕಿ ತಂಡ ಫೈನಲ್ ತಲುಪಿದೆ.
ಮೊದಲ ಕ್ವಾರ್ಟರ್ ನಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸಲಿಲ್ಲ. ಎರಡನೇ ಕ್ವಾರ್ಟರ್ ನಲ್ಲಿ ಭಾರತ ಎರಡು ಗೋಲು ಗಳಿಸಿತು. ಅಭಿಷೇಕ್ ಅವರು ಭಾರತದ ಖಾತೆ ತೆರೆದರೆ ಮನದೀಪ್ ಸಿಂಗ್ ಏಕಾಂಗಿ ಸಾಹಸದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಈ ಹಂತದಲ್ಲಿ ರಿಯಾನ್ ಜ್ಯೂಲಿಯಸ್ ದಕ್ಷಿಣ ಆಫ್ರಿಕಾದ ಮರುಹೋರಾಟ ಸಂಘಟಿಸಿದರು. ನಾಲ್ಕನೇ ಕ್ವಾರ್ಟರ್ ನಲ್ಲಿ ಕೂಡಾ ಭಾರತ ಮುನ್ನಡೆ ಕಾಯ್ದುಕೊಂಡಿತು. ಪಂದ್ಯದ ಕೊನೆಯ ವೇಳೆಗೆ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದವು. ಅಂತಿಮವಾಗಿ ಭಾರತ ಗೆಲುವಿನ ನಗೆ ಬೀರಿತು.
ಭಾರತ ಇದುವರೆಗೆ ಕೂಟದಲ್ಲಿ ಅಜೇಯವಾಗಿ ಉಳಿದಿದ್ದು, ಮೂರು ಜಯ ಹಾಗೂ ಒಂದು ಡ್ರಾ ಸಾಧಿಸಿದೆ. ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಂದು ಪಂದ್ಯದಲ್ಲಿ ಸೋತಿದೆ. ವಿಶ್ವದಲ್ಲಿ 13ನೇ ಕ್ರಮಾಂಕದಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಫೇವರಿಟ್ ಆಗಿತ್ತು.
ಕಾಮನ್‍ವೆಲ್ತ್ ಕ್ರೀಡಾಕೂಟ; ಹಾಕಿಯಲ್ಲಿ ಭಾರತದ ವನಿತೆಯರಿಗೆ ಸೋಲು
ಬಿ ಗುಂಪಿನಲ್ಲಿ ಭಾರತ ಅಗ್ರಸ್ಥಾನಿಯಾಗಿದ್ದರೆ, ದಕ್ಷಿಣ ಆಫ್ರಿಕಾ ಎ ಗುಂಪಿನ ಎರಡನೇ ಸ್ಥಾನಿಯಾಗಿ ಸೆಮಿಫೈನಲ್‍ಗೆ ಮುನ್ನಡೆದಿತ್ತು. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ವಿಜೇತ ತಂಡವನ್ನು ಭಾರತ ಫೈನಲ್‍ನಲ್ಲಿ ಎದುರಿಸಲಿದೆ. ಸೆಮಿಫೈನಲ್‍ನಲ್ಲಿ ಸೋತ ತಂಡಗಳು ಕಂಚಿನ ಪದಕಕ್ಕಾಗಿ ಸೆಣೆಸಲಿವೆ.